ಹೂಗ್ಲಿ(ಪಶ್ಚಿಮ ಬಂಗಾಳ):ಜೈ ಶ್ರೀರಾಮ್ ಘೋಷಣೆ ಕೇಳುತ್ತಿದ್ದಂತೆ ಭಾಷಣ ಮಾಡದೆ ತೆರಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ತಮ್ಮ ಆಕ್ರೋಶ ಹೊರಹಾಕಿದ್ದು, ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದೆರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಭಾಷಣ ಮಾಡಲು ಮಮತಾ ಬ್ಯಾನರ್ಜಿ ಆಗಮಿಸುತ್ತಿದ್ದಂತೆ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಮತಾ, ಸಮಾರಂಭಕ್ಕೆ ಕರೆದು ಅವಮಾನಿಸಬೇಡಿ ಎಂದು ಸಭೆಯಿಂದ ಹೊರ ನಡೆದಿದ್ದರು.
ಇಂದು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಮತಾಂಧ ದೇಶದ್ರೋಹಿಗಳು ಪ್ರಧಾನಿ ಮುಂದೆ ನನಗೆ ಕೀಟಲೆ ಮಾಡುವ ಧೈರ್ಯ ಮಾಡಿದರು. ಅವರು ಯಾರು ಎಂಬುದು ನನಗೆ ಗೊತ್ತಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಎಲ್ಲರ ನಾಯಕ. ಆದರೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ್ ಠಾಗೂರ್, ವಿದ್ಯಾಸಾಗರ್ ಸೇರಿದಂತೆ ಎಲ್ಲ ವಿದ್ವಾಂಸರಿಗೂ ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.