ನವದೆಹಲಿ: ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಗುರುವಾರ ನಿಧನ ಹೊಂದಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದ್ದಾರೆ. ಜೆಡಿಯು ನಾಯಕನೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗಿದ್ದ ಒಡನಾಟವನ್ನು ಅವರು ಸ್ಮರಿಸಿದ್ದಾರೆ. ಇದೇ ವೇಳೆ ರಾಜಕೀಯ ಜೀವನದ ಅನೇಕ ಪಟ್ಟುಗಳನ್ನು ಶರದ್ ಯಾದವ್ ಅವರಿಂದ ಕಲಿತಿರುವುದಾಗಿ ತಿಳಿಸಿದ್ದಾರೆ.
'ತುಂಬಲಾರದ ನಷ್ಟ'- ಬಿಹಾರ ಸಿಎಂ ನಿತೀಶ್ ಕುಮಾರ್: ಶರದ್ ಯಾದವ್ ಅವರ ಸಾವು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕಾದ ಅತಿದೊಡ್ಡ ನಷ್ಟ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಶರದ್ ಯಾದವ್ ಅವರ ಜೊತೆ ದೀರ್ಘ ಸಂಬಂಧವನ್ನು ನಾನು ಹೊಂದಿದ್ದೇನೆ. ಅವರ ಸಾವು ಬೇಸರ ಮತ್ತು ಆಘಾತ ಮೂಡಿಸಿದೆ. ಅವರೊಬ್ಬ ದೊಡ್ಡ ಸಮಾಜವಾದಿ ನಾಯಕ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಗಳಿಂದ ಸಂತಾಪ: ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ 70ರ ದಶಕದಲ್ಲಿ ಹೋರಾಡಿದ ವಿದ್ಯಾರ್ಥಿ ನಾಯಕ ಎಂದು ಶರದ್ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೆನಪಿಸಿಕೊಂಡು ಸಂತಾಪ ಸೂಚಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಅವರ ಸಾವು ಬೇಸರ ಮೂಡಿಸಿದೆ. ಸಂಸತ್ತಿನಲ್ಲಿ ರಾಷ್ಟ್ರ ಧ್ವನಿಯಾಗಿದ್ದರು. ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.