ನವದೆಹಲಿ: 2005ರಲ್ಲಿ ನಡೆದ ಉತ್ತರ ಪ್ರದೇಶದ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ರನ್ನು ಗುಜರಾತ್‌ನ ಸಬರಮತಿ ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜೈಲಿಗೆ ಭಾನುವಾರ ಸ್ಥಳಾಂತರಿಸಲಾಗುತ್ತಿದೆ. 45 ಪೊಲೀಸರ ತಂಡವು ಬಿಗಿ ಭದ್ರತೆಯಲ್ಲಿ ಗುಜರಾತ್‌ನಿಂದ ಯುಪಿಗೆ ಅತಿಕ್ನನ್ನು ಕರೆದುಕೊಂಡು ಬರುತ್ತಿದ್ದಾರೆ.
ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಮತ್ತು ಆತನ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಇದೇ ಫೆಬ್ರವರಿ 24ರಂದು ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಪ್ರಮುಖ ಆರೋಪಿಯಾಗಿದ್ದು, ಈ ಹಿಂದಿನ ಪ್ರಕರಣದಲ್ಲಿ ಈತನನ್ನು ಸಬರಮತಿ ಜೈಲಿನಲ್ಲಿ ಇರಿಸಲಾಗಿತ್ತು.
ಹತ್ಯೆ ಮಾಡಲಾಗುತ್ತದೆ ಎಂದ ಅತೀಕ್:ಉತ್ತರ ಪ್ರದೇಶದ ಪೊಲೀಸರು ಸಬರಮತಿ ಜೈಲಿನಿಂದ ಹೊರ ಕರೆದುಕೊಂಡು ಬರುತ್ತಿದ್ದಂತೆ ಅತೀಕ್ ಅಹ್ಮದ್ ಜೀವ ಭಯದ ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವ್ಯಾನ್‌ಗೆ ಹತ್ತಿಸುವಾಗ ಸ್ಥಳದಲ್ಲಿದ್ದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಾಫಿಯಾ ಡಾನ್, ನನಗೆ ಇವರ ಕಾರ್ಯಕ್ರಮ ಗೊತ್ತಿದೆ. ನನ್ನನ್ನು ಹತ್ಯೆ ಮಾಡಲಾಗುತ್ತದೆ ಎಂದು ಹೇಳಿಕೊಂಡು ಹೋದರು.
ಮಾರ್ಚ್ 28ರಂದು ಕೋರ್ಟ್ಗೆ ಅತೀಕ್ ಹಾಜರು:ಈ ಹಿಂದಿನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಉದ್ದೇಶದಿಂದ ಪ್ರಯಾಗರಾಜ್ ಪೊಲೀಸ್ ತಂಡವು ಇಂದು ಸಾಬರಮತಿ ಜೈಲಿಗೆ ತೆರಳಿತ್ತು. ಅಲ್ಲಿ ಅತೀಕ್ ಅಹ್ಮದ್ರನ್ನು ವಶಕ್ಕೆ ಪಡೆದಿರುವ ಯುಪಿ ಪೊಲೀಸರು, ಬಂದೋಬಸ್ತ್ನಲ್ಲಿ ಶಿಫ್ಟ್ ಮಾಡಲಾಗುತ್ತಿದೆ. ಅತೀಕ್‌ರನ್ನು ಮಾರ್ಚ್ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅದೇ ದಿನವೇ ನ್ಯಾಯಾಲಯವು ತೀರ್ಪು ಪ್ರಕಟಿಸಲಿದೆ ಎಂದು ಪ್ರಯಾಗರಾಜ್ ಪೊಲೀಸ್ ಆಯುಕ್ತ ರಮಿತ್ ಶರ್ಮಾ ತಿಳಿಸಿದ್ದಾರೆ.