ಮುಂಬೈ (ಮಹಾರಾಷ್ಟ್ರ): ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಹಿರಿಯ ರಾಜಕಾರಣಿ ಶರದ್ ಪವಾರ್ ಘೋಷಿಸಿದ್ದಾರೆ. ಇದೇ ವೇಳೆ ಸಹಕಾರ, ಸಂಸ್ಕೃತಿ, ಕ್ರೀಡೆಗಳಲ್ಲಿ ಹೆಚ್ಚಿನ ಕೆಲಸ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ. ಶರದ್ ಪವಾರ್ ಅವರ ಈ ಏಕಾಏಕಿ ಘೋಷಣೆಯು ಪಕ್ಷದ ಕಾರ್ಯಕರ್ತರಲ್ಲಿ ಆಘಾತಕ್ಕೆ ಕಾರಣವಾಗಿದೆ.
ಮುಂಬೈನ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿ ಇಂದು ನಡೆದ ತಮ್ಮ ಆತ್ಮಚರಿತ್ರೆ ''ಲೋಕ ಮಾಜೆ ಸಾಂಗಾತಿ''ಯ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ಮಹತ್ವದ ಘೋಷಣೆ ಮಾಡಿದರು. ಪವಾರ್ ಅವರ ಜೀವನದಲ್ಲಿ 2015ರ ನಂತರದ ಬೆಳವಣಿಗೆಗಳನ್ನು ಈ ಮರಾಠಿ ಪುಸ್ತಕ ಹೊಂದಿದೆ. ಈ ಹಿಂದೆ ಕೇಂದ್ರ ರಕ್ಷಣಾ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ ನಂತರ ಅವರು ತಮ್ಮ ''ಆನ್ ಮೈ ಟರ್ಮ್ಸ್'' ಎಂಬ ಆತ್ಮಚರಿತ್ರೆ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದರು.
ಇದನ್ನೂ ಓದಿ:ಕಾಂಗ್ರೆಸ್-ಜೆಡಿಎಸ್ ಎರಡೂ ಒಂದೇ, ಭ್ರಷ್ಟ, ಪರಿವಾರವಾದಿ ಪಕ್ಷಗಳು: ಚಿತ್ರದುರ್ಗದಲ್ಲಿ ಮೋದಿ
ಕಣ್ಣೀರು ಹಾಕಿದ ನಾಯಕರು: 82 ವರ್ಷದ ಪವಾರ್, ಮುಂದಿನ ಅಧ್ಯಕ್ಷರನ್ನು ನೇಮಕ ಮಾಡಲು ಹಿರಿಯ ಎನ್‌ಸಿಪಿ ನಾಯಕರ ಸಮಿತಿಯನ್ನು ನಾನು ರಚಿಸಿದ್ದೇನೆ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಅವಧಿ ಇನ್ನೂ ಮೂರು ವರ್ಷಗಳು ಬಾಕಿ ಇದ್ದು, ಕಳೆದ 55 ವರ್ಷಗಳಿಂದ ಸಾಮಾಜಿಕ - ರಾಜಕೀಯಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಉಳಿದಿದ್ದೇನೆ. ಮುಂದೆ ಕೂಡ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಆದರೆ, ಏಕಾಏಕಿ ಪವಾರ್ ಅಧ್ಯಕ್ಷ ಸ್ಥಾನವನ್ನು ತೊರೆಯುವ ಘೋಷಣೆ ಮಾಡಿದ್ದು, ಸಮಾರಂಭದಲ್ಲಿ ನೆರೆದಿದ್ದ ಕಾರ್ಯಕರ್ತರಲ್ಲಿ ಒಂದು ಕ್ಷಣ ಆಘಾತ ಉಂಟು ಮಾಡಿತು. ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಸೇರಿದಂತೆ ಅನೇಕರು ಕಣ್ಣೀರು ಹಾಕಿದರು. ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪವಾರ್ ಅವರಿಗೆ ಮನವಿ ಮಾಡಿದರು.