ಬಲರಾಂಪುರ್(ಉತ್ತರ ಪ್ರದೇಶ):ಡಿಸೆಂಬರ್ 8ರಂದು ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಧರ್ಮಪತ್ನಿ ಸೇರಿದಂತೆ 13 ಯೋಧರು ಹುತಾತ್ಮರಾಗಿದ್ದಾರೆ. ಮಡಿದ ಎಲ್ಲ ವೀರ ಯೋಧರಿಗೂ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಸಂತಾಪ ಸೂಚಿಸಿದರು.
ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟವಾಗಿದೆ. ದೇಶದ ಸಶಸ್ತ್ರ ಪಡೆ ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸಿದ್ದರು ಎಂದರು.
ಸೈನಿಕನು ಮಿಲಿಟರಿಯಲ್ಲಿ ಇರುವವರೆಗೆ ಮಾತ್ರ ಸೈನಿಕನಾಗಿ ಇರುವುದಿಲ್ಲ. ಅವರ ಇಡೀ ಜೀವನ ಯೋಧನಾಗಿದ್ದು, ಪ್ರತಿ ಕ್ಷಣವೂ ಶಿಸ್ತು ಮತ್ತು ದೇಶಕ್ಕಾಗಿ ಸಮರ್ಪಿತವಾಗಿರುತ್ತದೆ ಎಂದು ತಿಳಿಸಿದರು. ಬಿಪಿನ್ ರಾವತ್ ಅವರನ್ನ ಕಳೆದುಕೊಂಡಿರುವ ದೇಶ ಶೋಕ, ನೋವಿನಲ್ಲಿದೆ. ಆದರೆ, ದೇಶದ ಅಭಿವೃದ್ಧಿ ತಡೆ ಹಿಡಿಯಲು ಸಾಧ್ಯವಿಲ್ಲ. ಭಾರತೀಯರು ಒಟ್ಟಾಗಿ ಕಷ್ಟಪಟ್ಟು ಕೆಲಸ ಮಾಡ್ತಿದ್ದು, ಪ್ರತಿ ಸವಾಲು ಎದುರಿಸುತ್ತಿದ್ದೇವೆ ಎಂದರು.