ಕೋಲ್ಕತ್ತಾ(ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಬಿರ್ಭೂಮ್ನಲ್ಲಿ 8 ಜನರನ್ನು ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿದ್ದು, ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಗುರುವಾರ ತೆರಳಿ ಪರಿಸ್ಥಿತಿ ಅವಲೋಕನ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ, ಪ್ರಕರಣದಲ್ಲಿ ವಿರೋಧ ಪಕ್ಷಗಳ ಕೈವಾಡವಿದ್ದು, ಅಲ್ಲಿಗೆ ಹೋಗಲು ನಾನು ಬಯಸುವುದಿಲ್ಲ. ಈಗಾಗಲೇ ಅನೇಕ ರಾಜಕೀಯ ಪಕ್ಷಗಳು ಆ ಸ್ಥಳಕ್ಕೆ ತೆರಳಿರುವ ಕಾರಣ ಜಗಳಕ್ಕಿಳಿಯಲು ನನಗಿಷ್ಟವಿಲ್ಲ. ವಿರೋಧ ಪಕ್ಷಗಳು ಸ್ಥಳದಲ್ಲೇ ಬೀಡುಬಿಟ್ಟು ಸಿಹಿತಿಂಡಿ ಸವಿಯುತ್ತಾ ಕುಳಿತುಕೊಂಡಿವೆ. ವಿರೋಧ ಪಕ್ಷದ ನಾಯಕರು ಅಲ್ಲಿರುವಾಗ ನಾನು ಯಾವುದೇ ಜಗಳಕ್ಕೂ ಇಳಿಯಲು ಮುಂದಾಗುವುದಿಲ್ಲ ಎಂದರು.
ಘಟನೆ ದುರದೃಷ್ಟಕರ. ಇದು ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳಿಂದ ನಮ್ಮ ಸರ್ಕಾರಕ್ಕೆ ಮಸಿ ಬಳಿಯುವ ಹುನ್ನಾರ. ಘಟನೆಗೆ ಕಾರಣವಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಭಾರಿ ಪೊಲೀಸ್ ಅಧಿಕಾರಿ, ಎಸ್ಡಿಪಿಒ ಹಾಗೂ ಹಿರಿಯ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ಡಿಜಿಪಿ ಆ ಜಿಲ್ಲೆಯಲ್ಲೇ ಉಳಿದುಕೊಂಡಿದ್ದಾರೆ ಎಂದರು.