ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿವಾದದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಹೆದರುತ್ತಿದ್ದಾರೆ. ಅದಕ್ಕಾಗಿಯೇ ಸರ್ಕಾರ ಈ 'ತಮಾಷಾ' ಸೃಷ್ಟಿಸುತ್ತಿದೆ (Prepared this ‘tamasha’ - drama) ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಅದಾನಿ ನಡುವೆ ಏನು ಸಂಬಂಧ ಎಂಬುದೇ ನಮ್ಮ ಮುಖ್ಯ ಪ್ರಶ್ನೆಯಾಗಿದೆ ಎಂದು ಪುನರುಚ್ಚರಿಸಿದರು.
ಬ್ರಿಟನ್ ಪ್ರವಾಸದಲ್ಲಿ ಸಂದರ್ಭದಲ್ಲಿ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತಾರೂಢ ಬಿಜೆಪಿ ಇದೇ ವಿಷಯವನ್ನು ಪ್ರಸ್ತಾಪಿಸಿ ರಾಹುಲ್ ಕ್ಷಮೆಗೆ ಆಗ್ರಹಿಸುತ್ತಿದೆ. ಮತ್ತೊಂದೆಡೆ, ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದರಿಂದ ಸುಗಮವಾಗಿ ಕಲಾಪ ನಡೆಯದೇ ಮುಂದೂಡಿಕೆಯಾಗುತ್ತಿದೆ.
ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ - ರಾಹುಲ್: ಇದರ ನಡುವೆ ಇಂದು ರಾಹುಲ್ ಸಂಸತ್ತಿಗೆ ಆಗಮಿಸಿದ್ದಾರೆ. ಇಡೀ ವಿವಾದದ ಕುರಿತಾಗಿ ಸುದ್ದಿಗೋಷ್ಠಿ ನಡೆಸಿರುವ ಮಾತನಾಡಿದ ಅವರು, ಸಂಸತ್ತಿನಲ್ಲಿ ನನ್ನ ವಿರುದ್ಧ ಆರೋಪ ಮಾಡಿರುವಂತೆ ಈ ಕುರಿತ ನನಗೆ ಮಾತನಾಡಲು ಅವಕಾಶ ನೀಡುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು. ಭಾರತದ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸುತ್ತಿದ್ದರೆ ನಾನು ಸಂಸತ್ತಿನಲ್ಲಿ ಮಾತನಾಡಲು ಸಾಧ್ಯವಾಗುತ್ತಿತ್ತು. ಈಗ ನೀವು ನೋಡುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯಾಗಿದೆ ಎಂದು ಹೇಳಿದರು.
ಅಲ್ಲದೇ, ಇಂದು ಬೆಳಗ್ಗೆ ನಾನು ಸಂಸತ್ತಿಗೆ ಹೋಗಿ ಲೋಕಸಭಾ ಸ್ಪೀಕರ್ ಭೇಟಿ ಮಾಡಿ ಸದನದಲ್ಲಿ ಮಾತನಾಡಲು ಬಯಸುತ್ತೇನೆ ಎಂದು ತಿಳಿಸಿರುವೆ. ಸರ್ಕಾರದ ನಾಲ್ವರು ಸಚಿವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಹೀಗಾಗಿ ನನ್ನ ಅಭಿಪ್ರಾಯವನ್ನೂ ಸದನದಲ್ಲಿ ಮಂಡಿಸುವ ಹಕ್ಕು ನನಗಿದೆ. ನಾಳೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ ಎಂಬ ಭರವಸೆ ನನಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಅದಾನಿ ವಿಚಾರದಲ್ಲಿ ಸರ್ಕಾರ ಇನ್ನೂ ಹೆದರುತ್ತಿದೆ. ಇದರಿಂದ ಸರ್ಕಾರ ವಿಚಲಿತವಾಗಿದೆ. ಅದಾನಿ ಮತ್ತು ಮೋದಿ ನಡುವಿನ ಸಂಬಂಧವೇನು ಎಂಬುವುದೇ ನನ್ನ ಮುಖ್ಯ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.