ಪೆಡನಾ, ಕೃಷ್ಣ (ಆಂಧ್ರ ಪ್ರದೇಶ):"ನಾನು ಟಿಡಿಪಿಯನ್ನು ಬೆಂಬಲಿಸಲು ಎನ್‌ಡಿಎಯಿಂದ ಹೊರಬಂದಿದ್ದೇನೆ. ಟಿಡಿಪಿ ಪ್ರಬಲ ಪಕ್ಷವಾಗಿದೆ. ಆಂಧ್ರಪ್ರದೇಶಕ್ಕೆ ರಾಜ್ಯದ ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಆಡಳಿತದ ಅಗತ್ಯವಿದೆ'' ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ.
''ಇಂದು ಟಿಡಿಪಿ ಸಂಕಷ್ಟದಲ್ಲಿದೆ ಮತ್ತು ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನರು ನೀಡುವ ಅಗತ್ಯವಿದೆ. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ, ವೈಎಸ್‌ಆರ್‌ಸಿಪಿ ರಾಜ್ಯದಲ್ಲಿ ಮುಳುಗಿ ಹೋಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಪವರ್ ಸ್ಟಾರ್ ಪವನ್ ಕಲ್ಯಾಣ ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಚಂದ್ರಬಾಬು ನಾಯ್ಡು ಜೊತೆ ಮಾತನಾಡಿದ್ದರು. ಈ ವೇಳೆ ಕೆಲ ಕಾಲ ರಾಜ್ಯ ರಾಜಕೀಯ ಕುರಿತಂತೆ ಚರ್ಚೆ ನಡೆಸಿದ್ದರು. ಈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪವನ್ ಕಲ್ಯಾಣ್, ರಾಜಕೀಯ ಷಡ್ಯಂತ್ರ ಮಾಡಿ ಚಂದ್ರಬಾಬು ನಾಯ್ಡು ವಿರುದ್ಧ ಅಕ್ರಮ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಆಂಧ್ರದಲ್ಲಿ ವೈಸಿಪಿಯ ಅರಾಜಕ ಆಡಳಿತ ಕೊನೆಗೊಳ್ಳಬೇಕಾದರೆ ಜನಸೇನಾ, ಬಿಜೆಪಿ ಮತ್ತು ಟಿಡಿಪಿ ಒಟ್ಟಾಗಿ ಸ್ಪರ್ಧಿಸಿ ವೈಎಸ್ಆರ್ ಕಾಂಗ್ರೆಸ್ ಅನ್ನು ಪರಾಭವಗೊಳಿಸಬೇಕು ಎಂದು ಪವನ್ ಕಲ್ಯಾಣ್ ಕಳೆದ ಗುರುವಾರ ಹೇಳಿದ್ದರು. ಇದೇ ವಿಷಯವನ್ನು ಕೇಂದ್ರದ ಹಿರಿಯರ ಗಮನಕ್ಕೂ ತರಲಾಗಿದೆ ಎಂದು ಅಂದು ಹೇಳಿದ್ದರು. ಆದರೆ ಈಗ ಟಿಡಿಪಿಗಾಗಿ ಎನ್ಡಿಎ ತೊರೆದಿರುವುದಾಗಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.