ನವದೆಹಲಿ :ಸುಗಂಧ ದ್ರವ್ಯದ ಬಗೆಗಿನ ಜಾಹೀರಾತಿನಲ್ಲಿ ಮಹಿಳೆಯರ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ತೋರಿಸಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಜಾಹೀರಾತನ್ನು ಕೂಡಲೇ ಅಮಾನತುಗೊಳಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ಅಲ್ಲದೇ, ಜಾಹೀರಾತು ಕೋಡ್‌ನ ಪ್ರಕಾರ ತನಿಖೆಯನ್ನೂ ಕೇಂದ್ರ ಸರ್ಕಾರ ಪ್ರಾರಂಭಿಸಿದೆ.
ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಲಾದ ಜಾಹೀರಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದು ಗಮನಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ. ಅಲ್ಲದೇ, ಜಾಹೀರಾತಿನ ವಿಡಿಯೋವನ್ನು ತಕ್ಷಣವೇ ತೆಗೆದು ಹಾಕುವಂತೆ ಟ್ವಿಟರ್ ಮತ್ತು ಯೂಟ್ಯೂಬ್ಗೂ ಪತ್ರ ಬರೆದು ಸಚಿವಾಲಯ ಸೂಚಿಸಿದೆ.
ಇತ್ತ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್ಸಿಐ) ಕೂಡ ಈ ಬಗ್ಗೆ ಟ್ವೀಟ್ ಮಾಡಿದೆ. ಈ ಜಾಹೀರಾತು ಎಎಸ್ಸಿಐ ಕಾಯ್ದೆಯ ಗಂಭೀರ ಉಲ್ಲಂಘನೆ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಇದರ ಬಗ್ಗೆ ತಕ್ಷಣ ಕ್ರಮಕೈಗೊಳ್ಳಲಾಗಿದೆ. ಈ ಜಾಹೀರಾತನ್ನು ಅಮಾನತುಗೊಳಿಸುವಂತೆ ಜಾಹೀರಾತುದಾರರಿಗೆ ಸೂಚಿಸಲಾಗಿದೆ. ಜೊತೆಗೆ ಈ ಕುರಿತು ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ತಿಳಿಸಿದೆ.