ಹೈದರಾಬಾದ್: ನಾನು ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಕೊಳ್ಳುತ್ತಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ನೋಡುತ್ತೇನೆ ಎಂದು ಎಂಐಎಂ ಸಂಸದ ಓವೈಸಿ ಸವಾಲು ಹಾಕಿದ್ದಾರೆ. ಈ ರಾಜ್ಯಕ್ಕೆ ಟಿಪ್ಪು ಬೇಕೇ ಅಥವಾ ರಾಮನ ಮತ್ತು ಹನುಮಂತನ ಭಕ್ತರು ಬೇಕೇ? ಹನುಮಂತನ ನೆಲದಲ್ಲಿ ನಾನು ಈ ಪ್ರಶ್ನೆ ಕೇಳುತ್ತಿದ್ದೇನೆ - ಟಿಪ್ಪು ಬೇಕಾ, ಶ್ರೀರಾಮನ ಭಜನೆಗಳನ್ನು ಹಾಡುವವರು ಮತ್ತು ಹನುಮಂತ ದೇವರನ್ನು ಪೂಜಿಸುವವರು ಬೇಕಾ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್ ಕಟೀಲ್ ಕೊಪ್ಪಳದ ಯಲಬುರ್ಗಾದಲ್ಲಿ ಹೇಳಿದ್ದರು.
ಅಸಾದುದ್ದೀನ್ ತಿರುಗೇಟು:ಕರ್ನಾಟಕದ ಬಿಜೆಪಿ ಅಧ್ಯಕ್ಷ ಮಾತಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ನಾನು ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಕೊಳ್ಳುತ್ತಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ನೋಡುತ್ತೇನೆ, ಕರ್ನಾಟಕ ಬಿಜೆಪಿ ಅಧ್ಯಕ್ಷರು ಹೇಳಿದ್ದನ್ನು ಪ್ರಧಾನಿ ಒಪ್ಪುತ್ತಾರೆಯೇ? ಇದು ಹಿಂಸೆ ಹಾಗೂ ಪ್ರಚೋದಿಸುವಂತಹ ಕರೆಯಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ? ಇದು ದ್ವೇಷದ ಭಾಷಣ ಅಲ್ಲವೇ ಎಂದು ಎಐಎಂಐಎಂ ಸಂಸದ ಓವೈಸಿ ಪ್ರಶ್ನಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ 'ಬುಲ್ಡೋಜರ್ ರಾಜಕೀಯ' ಮಾಡುತ್ತಿರುವವರು ತಾಯಿ - ಮಗಳ ಪ್ರಾಣ ತೆಗೆದಿದ್ದಾರೆ. ಅವರು ಬುಲ್ಡೋಜರ್ ಮೂಲಕ ಸರ್ಕಾರವನ್ನು ನಡೆಸಲು ಬಯಸುತ್ತಾರೆ, ಸಂವಿಧಾನದಂತೆ ಅಲ್ಲ. ಇಷ್ಟೆಲ್ಲ ಮಾಡುವುದರಿಂದ ಅವರಿಗೆ ರಾಜಕೀಯವಾಗಿ ಏನೂ ಲಾಭವಾಗುವುದಿಲ್ಲ. ತೆಲಂಗಾಣದಲ್ಲಿ ಅವರು ವಿಫಲರಾಗುತ್ತಾರೆ ಎಂದು AIMIM ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಇದನ್ನು ಓದಿ:ಜನರು ಕೃಷ್ಣದೇವರಾಯನ ಆರಾಧಿಸ್ತಾರೆ, ಟಿಪ್ಪುವಿನ್ನಲ್ಲ: ನಳೀನ್ ಕುಮಾರ್ ಕಟೀಲ್