ನವದೆಹಲಿ:ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡತಿ ಮಾರ್ಗರೇಟ್ ಆಳ್ವ ನಾಳೆ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ನವದೆಹಲಿಯಲ್ಲಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ನಿವಾಸದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನಾನು ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಈ ಮೂಲಕ ಎನ್ಡಿಎ ಅಭ್ಯರ್ಥಿ ಜಗದೀಪ್ ಧನ್ಕರ್ ವಿರುದ್ಧ ಹೋರಾಟ ಮಾಡಲಿದ್ದೇನೆ ಎಂದರು. ನಾನು ಯಾರಿಗೂ ಹೆದರುವುದಿಲ್ಲ ಎಂದಿರುವ ಆಳ್ವ, ಇದು ಕಠಿಣ ಹೋರಾಟ ಎಂಬುದು ನನಗೆ ಗೊತ್ತು. ಆದರೆ, ರಾಜಕೀಯದಲ್ಲಿ ಸೋಲು - ಗೆಲುವು ಮುಖ್ಯವಲ್ಲ, ಹೋರಾಟ ಅತಿ ಮುಖ್ಯ. ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಎಲ್ಲ ನಾಯಕರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಇದನ್ನೂ ಓದಿರಿ:ಉಪ ರಾಷ್ಟ್ರಪತಿ ಚುನಾವಣೆ: ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ನಾಮಪತ್ರ ಸಲ್ಲಿಕೆ
ಇದೇ ವೇಳೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ, ಮಾರ್ಗರೇಟ್ ಆಳ್ವ ಅರ್ಹ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸಾಮರ್ಥ್ಯ ಹೊಂದಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸುತ್ತೇವೆ. ಇಂದಿನ ಸಭೆಯಲ್ಲಿ 18 ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿವೆ ಎಂದರು. ಎನ್ಡಿಎ ಬೆಂಬಲಿತ ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಅಂತ್ಯಗೊಳ್ಳಲಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6ರಂದು ಚುನಾವಣೆ ನಡೆಯಲಿದ್ದು, ಅದೇ ಫಲಿತಾಂಶ ಬಹಿರಂಗಗೊಳ್ಳಲಿದೆ.