ಲೂಧಿಯಾನ (ಪಂಜಾಬ್) : ಗಿಯಾಸ್ಪುರ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಯ ಎರಡು ಪುಟಗಳ ವರದಿಯನ್ನು ಲೂಧಿಯಾನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುರ್ಭಿ ಮಲಿಕ್ ಅವರು ಪಂಜಾಬ್ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ಪ್ರಾಥಮಿಕ ತನಿಖಾ ವರದಿಯಲ್ಲಿ ಕಾರ್ಖಾನೆಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಹೈಡ್ರೋಜನ್ ಸಲ್ಫೈಡ್ ಅನಿಲವು 11 ಜನರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿವೆ.
ಮೂಲಗಳ ಪ್ರಕಾರ, ಈ ಪ್ರದೇಶದಲ್ಲಿ ಯಾವುದೇ ಕಾರ್ಖಾನೆಯಿಂದ ಹೊರ ಬರುವ ತ್ಯಾಜ್ಯ ಅಥವಾ ರಾಸಾಯನಿಕವನ್ನು ಚರಂಡಿಗೆ ಎಸೆಯಲಾಗುತ್ತಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಅಂತಿಮವಾಗಿ, 11 ಜನರ ಸಾವಿಗೆ ಯಾರೂ ಕಾರಣರಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಧಿಯಾನ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಲೂಧಿಯಾನ ಪೊಲೀಸ್ ಕಮಿಷನರ್ ಅವರು ಪ್ರತ್ಯೇಕ ಎಸ್‌ಐಟಿ ತಂಡವನ್ನ ಕೂಡ ರಚಿಸಿದ್ದಾರೆ. 11 ಜನರ ಸಾವಿಗೆ ಹೈಡ್ರೋಜನ್ ಸಲ್ಫೈಡ್ ಅನಿಲ ಕಾರಣವೆಂದು ತಿಳಿದುಬಂದಿದೆ. "ಅವಘಡ ಸಂಭವಿಸಿದ ಪ್ರದೇಶದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಕಾರ್ಖಾನೆಗಳಿದ್ದು, ಕಾರ್ಖಾನೆಗಳ ತ್ಯಾಜ್ಯವು ಮನೆಗಳ ಕೊಳಚೆಯೊಂದಿಗೆ ಮಿಶ್ರಣವಾಗಿದೆ" ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಆದರೆ, ತನಿಖೆಯಲ್ಲಿ ಕಾರ್ಖಾನೆ ತ್ಯಾಜ್ಯಾದಿಂದ ಘಟನೆ ಸಂಭವಿಸಿದೆ ಎಂದು ಬಹಿರಂಗವಾಗಿಲ್ಲ. ಬದಲಾಗಿ, ಕೊಳಚೆ ಅನಿಲಕ್ಕೆ ವಾತಾಯನ ವ್ಯವಸ್ಥೆ ಇಲ್ಲದ ಕಾರಣ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.