ಹೈದರಾಬಾದ್: ವರದಕ್ಷಿಣೆ ಎಂಬುದು ದೊಡ್ಡ ಸಾಮಾಜಿಕ ಪಿಡುಗು. ಇದೇ ಕಾರಣದಿಂದಲೇ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ಧೂರ್ ಶಾಸ್ತ್ರಿ ಅವರು ತಮ್ಮ ಮದುವೆ ಸಮಾರಂಭವಾದಲ್ಲಿ ನನಗೆ ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಇವರ ಹೇಳಿಕೆಯಿಂದಲೇ ಪ್ರೇರಣೆಗೊಂಡ ಸತ್ಯನರೇಶ್ ಇದೀಗ ತಮ್ಮ ಐ ಡೋಂಟ್ ವಾಂಟ್ ಡೌರಿ.ಕಾಂ ಎಂಬ ವೆಬ್ ಸೈಟ್ ಮೂಲಕ ಸ್ವಯಂವರ (ವಧು-ವರ ವೇದಿಕೆ)ಕ್ಕೆ ಮುಂದಾಗಿದೆ. ಇದೇ ತಿಂಗಳ ಡಿಸೆಂಬರ್ 23 ರಂದು ಜೂಮ್ ಅ್ಯಪ್ ಮೂಲಕ ಈ ಸ್ವಯಂವರ ಏರ್ಪಡಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಈ ಸ್ವಯಂವರ ನಡೆಯಲಿದ್ದು, ಈಗಾಗಲೇ ಇದಕ್ಕೆ 300 ಮಂದಿ ನೋಂದಣಿ ಮಾಡಿದ್ದಾರೆ.
ವರದಕ್ಷಿಣೆ ನಿಷೇಧದ ಗುರಿ: ವರದಕ್ಷಿಣೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ತಂದಿದ್ದು, ಇದನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ನಮ್ಮಲ್ಲಿ ಈ ವರದಕ್ಷಿಣೆ ಹಾವಳಿ ಕಡಿಮೆ ಆಗಿಲ್ಲ. ಮದುವೆ ಆಗುವ ಯುವತಿ ಉನ್ನತ ಶಿಕ್ಷಣ ಪಡೆದು ಉದ್ಯೋಗಿಯಾಗಿದ್ದರೂ, ಆಕೆಯ ಕುಟುಂಬವನ್ನು ಈ ವರದಕ್ಷಿಣೆ ಸಮಸ್ಯೆ ಕಾಡುತ್ತದೆ. ಇದೇ ಕಾರಣಕ್ಕೆ ಇಂದಿಗೂ ನಮ್ಮಲ್ಲಿ ಹೆಣ್ಣು ಮಕ್ಕಳು ಜನಿಸಿದಾಗ ಹೊರೆ ಎಂದು ನೋಡುವವರಿದ್ದಾರೆ. ಈ ವರದಕ್ಷಿಣೆ ಬೇರು ಸಮೇತ ಕಿತ್ತು ಹಾಕುವ ಪಣವನ್ನು ಮದುವೆಯಾಗುವ ಯುವಕ - ಯುವತಿಯರು ತೆಗೆದುಕೊಳ್ಳಬೇಕಿದೆ. ಈ ರೀತಿ ವರದಕ್ಷಿಣೆ ಇಲ್ಲದೇ ಮದುವೆಯಾಗುವ ಮಂದಿ ಪ್ರತಿ ವರ್ಷ ನಡೆಯುವ ಈ ಸ್ವಯಂವರದಲ್ಲಿ ಭಾಗಿಯಾಗಬಹುದಾಗಿದೆ. ಈ ವೇದಿಕೆಯಲ್ಲಿ ನೂರಾರು ಮಂದಿ ತಮಗೆ ಯಾವುದೇ ವರದಕ್ಷಿಣೆ ಬೇಡ ಎಂದು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಯುವಕನ ಅಭಿಯಾನ: ಕಳೆದ ಹತ್ತು ವರ್ಷಗಳಿಂದ ಇಂತಹ ಒಂದು ಪ್ರಯತ್ನವನ್ನು ಸತ್ಯ ನರೇಶ್ ಮಾಡಿಕೊಂಡು ಬರುತ್ತಿದ್ದಾರೆ. 2006ರಲ್ಲಿ ಐ ಡೋಂಟ್ ವಾಂಟ್ ಡೌರಿ ಎಂಬ ವೆಬ್ಸೈಟ್ ಆರಂಭಿಸುವ ಮೂಲಕ ವರದಕ್ಷಿಣೆ ವಿರುದ್ಧ ಅಭಿಯಾನ ಆರಂಭಿಸಿದರು. ಕಳೆದ 60 ವರ್ಷದಿಂದ ಭಾರತದಲ್ಲಿ ವರದಕ್ಷಿಣೆ ಎಂಬುದು ಅಕ್ರಮವಾಗಿದ್ದರೂ ಅದು ಸಮೃದ್ಧವಾಗಿ ಬೆಳೆಯುತ್ತಿದೆ. ಪ್ರತಿ ವರ್ಷ ಈ ವರದಕ್ಷಿಣೆಯಿಂದಾಗಿ 8 ಸಾವಿರ ಸಾವು ಸಂಭವಿಸುತ್ತದೆ. ಈ ವರದಕ್ಷಿಣೆ ಬಡ ಕುಟುಂಬವನ್ನು ಸಾಲಗಾರರನ್ನಾಗಿ ಮಾಡುತ್ತದೆ.