ಹೈದರಾಬಾದ್:ತೆಲಂಗಾಣದ ಬಂಜಾರಾ ಹಿಲ್ಸ್‌ನಲ್ಲಿ ಶನಿವಾರ ವ್ಯಕ್ತಿಯೊಬ್ಬರು ಮಾದಕವಸ್ತು ಸೇವನೆ ಜಾಸ್ತಿಯಾದ ಪರಿಣಾಮ ಮೃತಪಟ್ಟಿರುವ ಘಟನೆ ನಡೆದಿದೆ. ನಗರದಲ್ಲಿ ಇತ್ತೀಚೆಗೆ ಪಾರ್ಟಿ ಸಂಸ್ಕೃತಿ, ವಿಶೇಷವಾಗಿ ವಾರಾಂತ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಹೆಚ್ಚಾಗುತ್ತಿದೆ. ವಾರಾಂತ್ಯದ 'ಲಿಕ್ಕರ್ ಪಾರ್ಟಿಗಳನ್ನು' ಹೆಚ್ಚಾಗಿ ಮುಖ್ಯ ನಗರ ಪ್ರದೇಶಗಳಲ್ಲಿನ ಪಬ್‌ಗಳಲ್ಲಿ ಮತ್ತು ಹೈದರಾಬಾದ್‌ನ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ಗಳಲ್ಲಿ ಆಯೋಜಿಸಲಾಗುತ್ತಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಡ್ರಗ್ಸ್ ದಂಧೆ ಭೇದಿಸುವಂತೆ ಮುಖ್ಯಮಂತ್ರಿ ಕೆಸಿಆರ್ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆ ಹೈದರಾಬಾದ್ ಪೊಲೀಸರು ಕಳೆದ ಕೆಲವು ತಿಂಗಳುಗಳಿಂದ ಇಂತಹ ಪಾರ್ಟಿಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ಘಟನೆಯು ಇಂತಹ ಅಪರಾಧಗಳನ್ನು ನಿರ್ಮೂಲನೆ ಮಾಡಲು ಪೊಲೀಸರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಸಾಕಷ್ಟು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ಖುದ್ದು ಸಿಎಂ ಆತಂಕ ವ್ಯಕ್ತಪಡಿಸಿದ್ದು, ಹಲವು ಸೆಲೆಬ್ರಿಟಿಗಳೂ ಈ ಡ್ರಗ್ಸ್ ದಂಧೆಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾರೆ.
ಹೇಗೆ ಮತ್ತು ಎಲ್ಲಿ?:ಹಿಂದೆ, ಹೈದರಾಬಾದ್‌ನಿಂದ ಹೆಚ್ಚಿನ ಯುವಕರು ವಾರಾಂತ್ಯದ ಆಚರಣೆಗಾಗಿ ಗೋವಾ, ಬೆಂಗಳೂರು ಮತ್ತು ಮುಂಬೈ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಹೈದರಾಬಾದ್‌ನಲ್ಲಿ ಈ 'ಆಚರಣೆ'ಗಳು ಜೋರಾಗಿ ನಡೆಯುತ್ತಿವೆ. ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ವೆಬ್‌ಸೈಟ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ Whatsapp, Facebook ಮತ್ತು Instagram ಮೂಲಕ ಆನ್‌ಲೈನ್‌ನಲ್ಲಿ ಆಯೋಜಿಸಲಾಗುತ್ತದೆ ಮತ್ತು ಜನಪ್ರಿಯಗೊಳಿಸಲಾಗುತ್ತದೆ.
ವೆಬ್‌ಸೈಟ್‌ಗಳು ಡ್ರಗ್ಸ್ ಬೇಡಿಕೆಯನ್ನು ನೋಡಿ, ಅದಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡುತ್ತವೆ. ಈ ಹಿಂದೆ ನಡೆಸಲಾದ ವರದಿಗಳು ಮತ್ತು ತನಿಖೆಗಳು ಹೈದರಾಬಾದ್‌ನ ಹೊರಗಿನಿಂದ ಡ್ರಗ್ಸ್ ಪೂರೈಕೆ ಮಾಡಲಾಗುತ್ತದೆ ಎಂದು ಸೂಚಿಸುತ್ತವೆ. ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಬಂಧಿತನಾಗಿದ್ದ ಮಾದಕ ದ್ರವ್ಯ ದಂಧೆಕೋರ ಟೋನಿಯನ್ನು ಪಂಜಗುಟ್ಟ ಪೊಲೀಸರು ವಿಚಾರಣೆಗೊಳಪಡಿಸಿದಾಗ, ಇದೇ ಮಾದಕ ವಸ್ತು ಪೂರೈಕೆ ದಂಧೆ ಬಯಲಾಗಿದೆ.
ಇದನ್ನೂ ಓದಿ:ಪಾಟ್ನಾದಲ್ಲಿದೆ ಡೀಸೆಲ್ ಎಂಜಿನ್ ಬುಲೆಟ್ : ಒಂದು ಲೀಟರ್ಗೆ 80 ಕಿ.ಮೀ ಮೈಲೇಜ್
3 -ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‌ಗಳು ಸಾಮಾನ್ಯ ಸ್ಥಳಗಳು: ಮಾದಕ ದ್ರವ್ಯ ಸೇವನೆಗೆ ಮತ್ತು ವ್ಯಾಪಾರಕ್ಕೆ ಕೆಲವು ಸ್ಥಳಗಳು ಇವೆ. ಇವುಗಳಲ್ಲಿ ಹೆಚ್ಚಿನವು ನಗರದ ತ್ರೀ ಸ್ಟಾರ್ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿನ ಬಾರ್‌ಗಳಾಗಿವೆ. ತೆಲಂಗಾಣ ಅಬಕಾರಿ ಇಲಾಖೆಯು ಇತ್ತೀಚೆಗೆ ಮೂರು ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿನ ಹೆಚ್ಚಿನ ಬಾರ್‌ಗಳನ್ನು ಸೆಪ್ಟೆಂಬರ್ 2022 ರವರೆಗೆ 24 ಗಂಟೆಗಳ ಕಾಲ ಮುಂದುವರಿಸಲು ಅನುಮತಿಸಿದೆ. ಈ ಲಭ್ಯತೆಗಾಗಿ, ಇಲಾಖೆಯು ನಿರ್ವಹಣೆಗಾಗಿ 52,66,700 ರೂ. ಪರವಾನಗಿ ಶುಲ್ಕವನ್ನು ವಿಧಿಸುತ್ತದೆ. ಬಾರ್ ಮತ್ತು ರೆಸ್ಟೋರೆಂಟ್ 24 ಗಂಟೆಗಳ ಕಾಲ ನಡೆಸಲು ಹೆಚ್ಚುವರಿ 14 ಲಕ್ಷ ರೂ. ಹೆಚ್ಚುವರಿ ತೆರಿಗೆಯನ್ನು ಅಬಕಾರಿ ತೆರಿಗೆಯಾಗಿ ಪಾವತಿಸುತ್ತಾರೆ.
ತೆಲಂಗಾಣ ಅಬಕಾರಿ ಇಲಾಖೆಯ ನಿರ್ಧಾರವನ್ನು ಕೆಲವರು ತಮ್ಮ ಒಟ್ಟು ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಹಲವರು ಸಂಪೂರ್ಣ ಬಾರ್‌ಗಳನ್ನು ಬಾಡಿಗೆಗೆ ಪಡೆದು ಡ್ರಗ್ಸ್ ಪೂರೈಕೆ ವೇದಿಕೆಗಳಾಗಿ ಪರಿವರ್ತಿಸುತ್ತಿದ್ದಾರೆ. ಬಂಜಾರಾ ಹಿಲ್ಸ್‌ನಲ್ಲಿನ ವ್ಯಕ್ತಿಯ ಸಾವು ಇದೀಗ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸುವಂತೆ ಮಾಡಿದೆ. ಅಲ್ಲದೇ ನಗರದಲ್ಲಿ ಇಂತಹ ಆಚರಣೆಗಳನ್ನು ತೊಡೆದುಹಾಕಲು ಈ ವಿಷಯವನ್ನು ಸೂಕ್ಷ್ಮವಾಗಿ ಮತ್ತು ಹೆಚ್ಚು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಮಾಡಿದೆ.