ಹೈದರಾಬಾದ್: ಬ್ರಿಟನ್ನ ದೀರ್ಘಾವಧಿಯ ರಾಣಿ ಎಲಿಜಬೆತ್-II ಅವರು ಹೈದರಾಬಾದ್ನೊಂದಿಗೆ ಒಂದು ವಿಶೇಷ ಸಂಬಂಧ ಹೊಂದಿದ್ದರು. 40 ವರ್ಷಗಳ ಹಿಂದೆ ಭಾರತಕ್ಕೆ ಬಂದಾಗ ಅವರು ಹೈದರಾಬಾದ್ಗೂ ಭೇಟಿ ನೀಡಿದ್ದರು. ಆಗ ಇಲ್ಲಿನ ಸರ್ಕಾರದ ಆದರಾತಿಥ್ಯ ಮತ್ತು ಜನತೆಯ ಪ್ರೀತಿಗೆ ಅವರು ಮರುಳಾಗಿದ್ದರು. ಹಿತಕರವಾದ ಹೈದರಾಬಾದ್ ತನಗೆ ತುಂಬಾ ಇಷ್ಟವಾಗಿದೆ ಮತ್ತು ಈ ಪ್ರವಾಸವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು.
ಕಾಮನ್‌ವೆಲ್ತ್ ಸಮ್ಮೇಳನ ಉದ್ಘಾಟನೆಗೆ ಬಂದಿದ್ದರು ಕ್ವೀನ್: 1983 ರಲ್ಲಿ ರಾಣಿ ಎಲಿಜಬೆತ್-2 ದೆಹಲಿಯಲ್ಲಿ ನಡೆದ 48 ನೇ ಕಾಮನ್‌ವೆಲ್ತ್ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಹತ್ತು ದಿನಗಳ ಭೇಟಿಯಲ್ಲಿ ಮೂರು ದಿನಗಳ ಕಾಲ ಹೈದರಾಬಾದ್‌ನಲ್ಲಿ ತಂಗಿದ್ದರು. ನವೆಂಬರ್ 18, 1983 ರ ರಾತ್ರಿ ಅವರು ತಮ್ಮ ಪತಿ ಪ್ರಿನ್ಸ್ ಫಿಲಿಪ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ಬಂದರು. ಅಂದಿನ ಮುಖ್ಯಮಂತ್ರಿ ಎನ್ ಟಿಆರ್ ಮತ್ತು ರಾಜ್ಯಪಾಲ ರಾಮಲಾಲ್ ರಾಣಿಯವರನ್ನು ಸ್ವಾಗತಿಸಿದ್ದರು. ಬೇಗಂಪೇಟೆ ವಿಮಾನ ನಿಲ್ದಾಣ ಪ್ರದೇಶ ರಾಣಿಯ ದರ್ಶನಕ್ಕೆ ಬಂದ ಜನರಿಂದ ತುಂಬಿ ತುಳುಕುತ್ತಿತ್ತು. ಬೊಲ್ಲಾರಂನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ರಾಣಿ ದಂಪತಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು.
ಲ್ಯಾಬ್ ಉದ್ಘಾಟಿಸಿದ್ದ ರಾಣಿ: ಮರುದಿನ ರಾಣಿ ಬಿಎಚ್ಇಎಲ್ ಕಾರ್ಖಾನೆಯಲ್ಲಿ ಟರ್ಬೊಮಶಿನರಿ ಲ್ಯಾಬ್ ಅನ್ನು ಉದ್ಘಾಟಿಸಿದರು. ಪಟಂಚೇರುವಿನ ಇಕ್ರಿಸ್ಯಾಟ್‌ನಲ್ಲಿ ಗ್ರಾಮಸ್ಥರು ಬತುಕಮ್ಮನೊಂದಿಗೆ ಅವರನ್ನು ಸ್ವಾಗತಿಸಿದರು. ಸಂಜೆ ಗೋಲ್ಕೊಂಡ ಕೋಟೆಯ ಬಳಿ ಇರುವ ಕುತುಬ್ ಶಾಹಿ ಸಮಾಧಿಗೆ ರಾಣಿ ಭೇಟಿ ನೀಡಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರನ್ನು ಕಂಡು ಜನರತ್ತ ಕೈಬೀಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.