ಹೈದರಾಬಾದ್(ತೆಲಂಗಾಣ):ಹೈದರಾಬಾದ್ ವಿದ್ಯಾರ್ಥಿನಿಯೋರ್ವಳು 6 ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ವಿವಿಧ ಆಸ್ಪತ್ರೆಗಳಲ್ಲಿ ಏಳು ಗ್ರಂಥಾಲಯಗಳನ್ನು ಸ್ಥಾಪಿಸಿದ್ದಾರೆ. ಇತ್ತೀಚೆಗೆ, ಹೈದರಾಬಾದ್‌ನ ಎಂಎನ್‌ಜೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದೆ. 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಾಲಕಿಯ ಕಾರ್ಯವನ್ನು ಪ್ರಸ್ತಾಪಿಸಿ ಅಭಿನಂದಿಸಿದ್ದಾರೆ. ಶೀಘ್ರದಲ್ಲೇ ಬಾಲಕಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿದ್ಯಾರ್ಥಿನಿಯೊಂದಿಗೆ 'ಈಟಿವಿ ಭಾರತ' ಪ್ರತಿನಿಧಿ ವಿಶೇಷ ಸಂದರ್ಶನ ನಡೆಸಿದ್ದಾರೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ.
ಬಾಲಕಿಯ ಹೆಸರು ಆಕರ್ಷಣಾ(12). ಹೈದರಾಬಾದ್‌ನ ನಿವಾಸಿ. ಬೇಗಂಪೇಟೆಯ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಗರದಾದ್ಯಂತ ಸ್ವತಂತ್ರವಾಗಿ ಗ್ರಂಥಾಲಯಗಳನ್ನು ಸ್ಥಾಪಿಸುವ ಮಹತ್ತರ ಗುರಿ ಹೊಂದಿದ್ದಾಳೆ. ಬಾಲಕಿಯ ಈ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಸೆ.24 ರಂದು ಪ್ರಸಾರವಾದ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ ಶ್ಲಾಘಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಕರ್ಷಣಾ 'ಇದು ತನ್ನ ಕನಸು ನನಸಾಗುವ ಕ್ಷಣವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಪಿಎಂಒನಿಂದ ಪ್ರಧಾನಿ ಭೇಟಿಗೆ ಆಹ್ವಾನ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,"ಪ್ರಧಾನಿ ಭೇಟಿಗೆ ದಿನಾಂಕದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ ಅದು ಅಕ್ಟೋಬರ್ ಮೊದಲ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ" ಎಂದರು. ಸೆ.22ರಂದು ರಾತ್ರಿ 11.30ರ ಸುಮಾರಿಗೆ, ನನ್ನ ತಂದೆಗೆ ಪಿಎಂಒ ಕಚೇರಿಯಿಂದ ಕರೆ ಬಂತು. ಸೆ.23 ರಂದು ದೂರದರ್ಶನ ವರದಿಗಾರರು ಸಂದರ್ಶನಕ್ಕಾಗಿ ನಿಮ್ಮ ಮನೆಗೆ ಬರುತ್ತಾರೆ. ಆದ್ದರಿಂದ ನಿಮ್ಮ ಮಗಳು ಸಿದ್ಧರಾಗಿರಲು ಹೇಳಿ ಎಂದು ಅವರು ತಿಳಿಸಿದ್ದರು ಎಂದರು.
ಲೈಬ್ರರಿಗಳನ್ನು ಸ್ಥಾಪಿಸುವ ಆಲೋಚನೆ ಹೇಗೆ ಬಂತು? ಎಂಬ ಪ್ರಶ್ನೆಗೆ ಉತ್ತರಿಸಿದ ಆಕರ್ಷಣಾ "ಕೋವಿಡ್ ಸಮಯದಲ್ಲಿ ನಾನು ನನ್ನ ಪೋಷಕರೊಂದಿಗೆ ಎಂಎನ್‌ಜೆ ಕ್ಯಾನ್ಸರ್ ಮಕ್ಕಳ ಆಸ್ಪತ್ರೆಗೆ ಆಹಾರವನ್ನು ನೀಡಲು ಹೋಗಿದ್ದೆ. ಇದು 55 ದಿನಗಳ ಕಾಲ ಮುಂದುವರೆಯಿತು. ಆರಂಭದಲ್ಲಿ ಸುಮ್ಮನೆ ಹೋಗಿ ಬರುತ್ತಿದೆ. ಆದರೆ ಕೊನೆಯ 55 ದಿನ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿದೆ. ಅಲ್ಲಿ ಕಿಮೋಥೆರಪಿಗೆ ಹೋದಾಗ ಅವರಿಗೆ ಬಣ್ಣದ ಪುಸ್ತಕಗಳು ಮತ್ತು ಇತರ ವಿಷಯಗಳ ಅಗತ್ಯವಿದೆ ಎಂದು ವೈದ್ಯರು ಹೇಳಿದರು.