ಹೈದರಾಬಾದ್:ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಎಂದೇ ಖ್ಯಾತಿಗಳಿಸಿರುವ ಹೈದರಾಬಾದ್ ಇದೀಗ ಮನೆಗಳ ಬೆಲೆಯಲ್ಲಿ ದೇಶದ ಎರಡನೇ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದೆ. ರಿಯಲ್ ಎಸ್ಟೇಟ್ ಸೇವಾ ಸಂಸ್ಥೆ ನೈಟ್‌ಫ್ರಾಂಕ್ ಇಂಡಿಯಾ ದೇಶಾದ್ಯಂತ ಮನೆ ಬೆಲೆಗಳ ಕುರಿತ ವರದಿ ಬಿಡುಗಡೆ ಮಾಡಿದೆ. ಈ ಪೈಕಿ ವಾಣಿಜ್ಯ ನಗರಿ ಮುಂಬೈ ಅತ್ಯಂತ ದುಬಾರಿ ನಗರವಾಗಿ ಮೊದಲನೇ ಸ್ಥಾನದಲ್ಲಿದ್ದರೆ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ.
ನೈಟ್‌ಫ್ರಾಂಕ್ ಇಂಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ವಿವಿಧ ನಗರಗಳಲ್ಲಿ ಮನೆಗಳ ಬೆಲೆಗಳ ಬಗ್ಗೆ ಬಹಿರಂಗಪಡಿಸಿದೆ. ಗೃಹ ಸಾಲಕ್ಕೆ ಪಾವತಿಸುವ ಮಾಸಿಕ EMI ಮತ್ತು ಆದಾಯದ ಅನುಪಾತ ಆಧರಿಸಿ ಇದನ್ನು ಲೆಕ್ಕಹಾಕಲಾಗುತ್ತದೆ. ಪ್ರಸಕ್ತ ವರ್ಷ 2023ರಲ್ಲಿ ಹೈದರಾಬಾದ್‌ನಲ್ಲಿ ಮನೆಯ ಬೆಲೆಗಳು ಶೇ.11ರಷ್ಟು ಹೆಚ್ಚಾಗಿವೆ ಎಂದು ವರದಿ ತಿಳಿಸಿದೆ.
ವಿವಿಧ ನಗರಗಳಲ್ಲಿನ ಖರೀದಿದಾರರು ಪಾವತಿಸುತ್ತಿರುವ ಗೃಹ ಸಾಲದ ಮಾಸಿಕ ಕಂತುಗಳ ಬಗ್ಗೆಯೂ ಮಾಹಿತಿ ನೀಡಿದೆ. ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಮನೆ ಖರೀದಿದಾರರು ಆದಾಯದ ಶೇ.51ರಷ್ಟು ಇಎಂಐ ಪಾವತಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಮನೆ ಖರೀದಿದಾರರು ತಮ್ಮ ಆದಾಯದ ಶೇ.30 ರಷ್ಟು ಇಎಂಐಗಳನ್ನು ಪಾವತಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಜನರು ತಮ್ಮ ಆದಾಯದ ಶೇ.27 ಇಎಂಐ ಪಾವತಿಸುತ್ತಿದ್ದಾರೆ.