ಹೈದರಾಬಾದ್ : ಬಹುತೇಕ ಮಾಂಸಹಾರಿ ಪ್ರಿಯರಿಗೆ ಹೈದರಾಬಾದ್ ದಮ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುವುದು ಖಂಡಿತ. ಆದ್ದರಿಂದಲೇ ಭಾಗ್ಯನಗರದ ಪ್ರತಿ ಓಣಿಯಲ್ಲಿಯೂ ಬಿರಿಯಾನಿ ಹೋಟೆಲ್‌ಗಳನ್ನು ಕಾಣಬಹುದು. ಹೀಗಾಗಿಯೇ, ಹೈದರಾಬಾದ್ ಬಿರಿಯಾನಿಗೆ ಹೆಸರುವಾಸಿಯಾಗಿದೆ. ಸಂಡೇ ಬಂದರೆ ಸಾಕು ಕೆಲವರು ರೆಸ್ಟೋರೆಂಟ್‌ಗೆ ಹೋಗಿ ಬಾಯ್ತುಂಬ ಬಿರಿಯಾನಿ ಸವಿದು ಬರುತ್ತಾರೆ. ಇದೀಗ ಬಿರಿಯಾನಿ ಪ್ರಿಯರೊಬ್ಬರು ಹೋಟೆಲ್‌ಗೆ ಹೋಗಿ ಹೆಚ್ಚಿನ ಪ್ರಮಾಣದ ಮೊಸರು (ಮೊಸರು ರೈತಾ) ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿ ಥಳಿಸಿದ್ದು, ಪರಿಣಾಮ ಬಿರಿಯಾನಿ ಪ್ರೇಮಿ ಪ್ರಾಣ ಕೊನೆಯುಸಿರೆಳೆದಿದ್ದಾರೆ.
ಹೈದರಾಬಾದ್‌ನ ಪಂಜಗುಟ್ಟದಲ್ಲಿನ ಹೋಟೆಲ್‌ಗೆ ಬಂದಿದ್ದ ಗ್ರಾಹಕ ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯ ಕಂಡಿದೆ. ಚಂದ್ರಯ್ಯನಗುಟ್ಟದ ಲಿಯಾಕತ್ ಎಂಬವರು ಭಾನುವಾರ ರಾತ್ರಿ ಪಂಜಗುಟ್ಟ ಪ್ರದೇಶದಲ್ಲಿರುವ ಹೋಟೆಲ್‌ವೊಂದಕ್ಕೆ ಬಿರಿಯಾನಿ ತಿನ್ನಲು ಬಂದಿದ್ದರು. ಈ ವೇಳೆ ಅವರು ಸಿಬ್ಬಂದಿ ಬಳಿ ಹೆಚ್ಚುವರಿ ಮೊಸರು ಕೇಳಿದ್ದಾರೆ. ಬಳಿಕ, ಹೋಟೆಲ್ ಸಿಬ್ಬಂದಿ ಹೆಚ್ಚುವರಿ ಮೊಸರು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ ವಾಗ್ವಾದ ನಡೆದಿದೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿದ್ದು, ಸಿಬ್ಬಂದಿ ಲಿಯಾಖತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ :ಧಾರವಾಡದಲ್ಲಿ ಪುಂಡರ ಅಟ್ಟಹಾಸ : ಅರೆ ನಗ್ನರಾಗಿ ಬರಬೇಡಿ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ವಿಷಯ ತಿಳಿದ ಪಂಜಗುಟ್ಟ ಪೊಲೀಸರು ಹೊಟೇಲ್‌ಗೆ ಆಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಿಯಾಖತ್ ಪೊಲೀಸ್ ಠಾಣೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗದೇ ಸಾವನ್ನಪ್ಪಿದ್ದಾರೆ.