ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರನ್ನು 'ಭಾಗ್ಯನಗರ' ಎಂದು ಬದಲಾಯಿಸಲಾಗುವುದೆಂದು ಜಾರ್ಖಂಡ್ ಮಾಜಿ ಸಿಎಂ, ಬಿಜೆಪಿ ನಾಯಕ ರಘುಬರ್ ದಾಸ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿರುವ ಅವರು, ತೆಲಂಗಾಣದಲ್ಲಿ ಉದ್ಯಮಿಗಳಾಗಲಿ, ಸಾಮಾನ್ಯ ಜನರಿಗೆ ಟಿಆರ್ಎಸ್ ಮೇಲೆ ಸಾಕಷ್ಟು ಕೋಪವಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿದರೆ, ಅಭಿವೃದ್ಧಿಪರ ಕಾರ್ಯಗಳು ಆರಂಭಗೊಳ್ಳಲಿವೆ ಎಂದರು.
ಟಿಆರ್ಎಸ್ ಪಕ್ಷ ಕುಟುಂಬ ರಾಜಕಾರಣ ನಂಬಿ ಅಧಿಕಾರ ನಡೆಸುತ್ತಿದೆ. ತೆಲಂಗಾಣದ ಜನರ ಬಗ್ಗೆ ಮುಖ್ಯಮಂತ್ರಿಗಳು ಯೋಚನೆ ಮಾಡ್ತಿಲ್ಲ. ಹೀಗಾಗಿ, ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ತೆಲಂಗಾಣದಲ್ಲಿ ಕುಟುಂಬ ರಾಜಕಾರಣ ಕೊನೆಗಾಣಿಸುವ ಉದ್ದೇಶದಿಂದಲೇ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಆಯೋಜನೆ ಮಾಡಲಾಗಿದ್ದು, ಪ್ರಧಾನಿ ಮೋದಿ ಇದರಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.