ಹೈದರಾಬಾದ್:ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ಆರೋಗ್ಯ ಸಮಸ್ಯೆಯಿಂದಾಗಿ ದಾಖಲಾಗಿದ್ದ ಯುವ ವೈದ್ಯೆ ಮೃತಪಟ್ಟಿದ್ದು, 52 ಲಕ್ಷ ರೂ. ಹಣ ನೀಡಿದ ಬಳಿಕವೇ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ತೆಲಂಗಾಣದ ಹೈದರಾಬಾದ್ನಲ್ಲಿರುವ ಜುಬಿಲಿ ಹಿಲ್ಸ್‌ನ ಪ್ರಮುಖ ಆಸ್ಪತ್ರೆಯ ವಿರುದ್ಧ ಮೃತ ವೈದ್ಯೆಯ ಪತಿ ಹೀಗೆ ಆರೋಪ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತನ್ನ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದೂ ಗಂಭೀರವಾಗಿ ಆರೋಪಿಸಿದ್ದಾರೆ.
ಹೈದರಾಬಾದ್‌ನ ಬೇಗಂಪೇಟ್ ಬಳಿಯ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ವಿಕಿರಣಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿರುವ ಭಾವನಾ (31) ಒಂದು ವರ್ಷದ ಹಿಂದೆ ಡಾ.ಕಲ್ಯಾಣ್ ಅವರನ್ನು ವಿವಾಹವಾಗಿದ್ದರು. ಏಪ್ರಿಲ್ನಲ್ಲಿ ಕೊರೊನಾ ಸೋಂಕು ತಗುಲಿದ್ದ ಭಾವನಾ ವೈರಸ್ನಿಂದ ಗುಣಮುಖರಾಗಿದ್ದರು.
ಇದನ್ನೂ ಓದಿ: ಗಂಡನ ಮನೆಯವರ ಹಣದ ದಾಹಕ್ಕೆ ಸರ್ಕಾರಿ ಆಸ್ಪತ್ರೆ ಸ್ಟಾಫ್ ನರ್ಸ್ ಬಲಿ!
ಆದರೆ ಆ ಬಳಿಕ ಭಾವನಾರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಜುಬಿಲಿ ಹಿಲ್ಸ್‌ನಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ 26 ದಿನಗಳಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಮುಂಜಾನೆ ಮೃತಪಟ್ಟಿದ್ದಾರೆ. ಆಕೆಗೆ ಅಳವಡಿಸಲಾಗಿದ್ದ ಎಕ್ಮೊ ಪೈಪ್ನಲ್ಲಿ ರಕ್ತ ಸೋರಿಕೆಯಾಗಿದ್ದು, ಈ ಬಗ್ಗೆ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಕಾಳಜಿ ವಹಿಸಿಲ್ಲ. ಆ ನಂತರ ಭಾವನಾರ ಆಮ್ಲಜನಕ ಮಟ್ಟ ಕುಸಿದಿದೆ ಎಂದು ಕಲ್ಯಾಣ್ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೇ ಪತ್ನಿಯನ್ನು ಉಳಿಸಿಕೊಳ್ಳಲಾಗದ ನೋವಿನಲ್ಲಿದ್ದ ಕಲ್ಯಾಣ್ಗೆ ಆಸ್ಪತ್ರೆಯು 52 ಲಕ್ಷ ರೂ.ಗಳ ಚಿಕಿತ್ಸಾ ವೆಚ್ಚದ ಬಿಲ್ ಕೊಟ್ಟು ಮತ್ತೊಂದು ಶಾಕ್ ನೀಡಿದೆ. ದಿಕ್ಕು ತೋಚದ ವೈದ್ಯ ದೊಡ್ಡ ಮೊತ್ತದ ಹಣವನ್ನು ನೀಡಿ ಮೃತದೇಹವನ್ನು ಪಡೆದಿದ್ದಾರೆ.