ಹೈದರಾಬಾದ್:ಸಮುದ್ರದ ಮಧ್ಯೆ ಏಳುವ ಅಲೆಗಳ ಬಗ್ಗೆ ಆಕೆಗೆ ಹೆದರಿಕೆ ಇಲ್ಲ. ಸಮುದ್ರದ ಅಲೆಗಳಿಗಿಂತ ಜೀವನದ ಅನುಭವಗಳು ಆಕೆಗೆ ಭಯ ಮೂಡಿಸಿತು. ಪ್ರೀತಿ ಕೊಂಗರಾ ಜೀವನದ ಸ್ಪೂರ್ತಿಯ ಕಥೆ ಇದು. ತಂದೆ ಪ್ರೀತಿ ಕಾಣದೇ, ತಾಯಿ ಆಶ್ರಯದಲ್ಲಿ ದಿಟ್ಟೆಯಾಗಿ ಬೆಳೆದ 18 ವರ್ಷದ ಹೈದರಾಬಾದ್ನ ಯುವತಿ ಇದೀಗ ಸೈಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನಡೆಸುತ್ತಿದ್ದಾಳೆ. ಅಲೆಗಳ ವಿರುದ್ಧ ಯಾವುದೇ ಅಂಜಿಕೆ ಇಲ್ಲದೇ, ಅದರ ಲಯಕ್ಕೆ ತಕ್ಕಂತೆ ಆಡುವ ಈಕೆ ಆಟ ಎಂತಹವರನ್ನು ಮೋಡಿ ಮಾಡುತ್ತದೆ. ಈಕೆಯ ಅದ್ವೀತಿಯ ಪ್ರದರ್ಶನಕ್ಕೆ ಆನಂದ್ ಮಹೀಂದ್ರಾ ಕೂಡ ಮೆಚ್ಚುಗೆ ಪಡೆದಿದ್ದಾರೆ.
ಇನ್ನು ತಮ್ಮ ಜೀವನದ ಯಶಸ್ಸಿನ ಕುರಿತು ಮಾತನಾಡಿರುವ ಪ್ರೀತಿ ಕೊಂಗಾರಾ, ನನ್ನ ತಂದೆ ಜೊತೆಗಿನ ಯಾವುದೇ ಖುಷಿಯ ಕ್ಷಣಗಳು ನೆನಪಿಲ್ಲ. ಅವರು ವಾಚ್ಮನ್ ಆಗಿದ್ದರು. ನನಗೆ 7 ವರ್ಷ ಇದ್ದಾಗ ಅವರು ಅನಾರೋಗ್ಯಕ್ಕೆ ಒಳಗಾದರು. ನನ್ನ ತಾಯಿ ವಿಜಯಲಕ್ಷ್ಮಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ, ನನ್ನ ಮತ್ತು ನನ್ನ ಅಕ್ಕ ಪ್ರಿಯಳನ್ನು ಬೆಳೆಸಿದರು. ನಾವಿಬ್ಬರು ಸ್ವಲ್ಪ ದೊಡ್ಡವರಾದ ಬಳಿಕ ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ತಾಯಿಗೆ ನೆರವಾದೆವು.
ನಾನು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾಗ ನಂದಿ ಕಲ್ಯಾಣ್ ಫೌಂಡೇಷನ್ ವಾಟರ್ ಗೇಮ್ಸ್ನಲ್ಲಿ ಆಸಕ್ತಿ ಹೊಂದಿರುವವರಿಗೆ ಆಯ್ಕೆಗೆ ಶಾಲೆಗೆ ಬಂದರು. ಇದರಲ್ಲಿ ನಾನು ಆಯ್ಕೆ ಆದೆ. ಅಲ್ಲಿಯವರೆಗೆ ನನಗೆ ನೀರು ಎಂದರೆ ಭಯ ಇತ್ತು. ನೀರಿನ ಬಳಿ ಹೋಗಲು ನನಗೆ ಹೆದರುತ್ತಿದ್ದ ನನಗೆ ನನ್ನ ತಾಯಿ ಈ ತರಬೇತಿಗೆ ಸೇರುವಂತೆ ಮನವರಿಕೆ ಮಾಡಿದರು. ಅಲ್ಲಿಂದ ನನ್ನ ಮತ್ತು ಅಲೆಗಳ ಸ್ನೇಹ ಉಂಟಾಯಿತು.
ಮೊದಲ ಬಾರಿಗೆ ಹೆದರಿಕೆ ಇತ್ತು:ತರಬೇತಿ ಆರಂಭವಾದಾಗ ನೀರಿಗಿಳಿದಾಗ ಗಾಳಿಯ ರಭಸದ ವಿರುದ್ಧ ನಿಲ್ಲಲ್ಲು ಸಾಧ್ಯವಾಗದೇ, ನೀರಿನಲ್ಲಿ ಬಿದ್ದುಬಿಟ್ಟೆ. ನನ್ನ ಮಾರ್ಗದರ್ಶಕರಾಗಿದ್ದ ಸುಹೀಂ, ನಾನು ಬಿದ್ದು ಅಳುವಾಗ ಧೈರ್ಯದಿಂದ ಮುನ್ನುಗ್ಗುವಂತೆ ಹುರುದುಂಬಿಸಿದರು. ಮತ್ತೆ ತರಬೇತಿಗೆ ಮರಳಿ, ಸ್ಪರ್ಧೆಗೆ ತಯಾರಾದೆ. 2016ರಲ್ಲಿ ತೆಲಂಗಾಣ ರಾಜ್ಯ ಸೈಲಿಂಗ್ ಚಾಂಪಿಯನ್ ಅಲ್ಲಿ 15 ಸ್ಪರ್ಧೆಗಳ ವಿರುದ್ಧ ಸೆಣಸಿ ಬೆಳ್ಳಿ ಪದಕವನ್ನು ಗೆದ್ದೆ. ಇದೇ ವರ್ಷ, ಮನ್ಸೂನ್ ರೆಗಾಟ್ಟಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದೆ. ನಾನು ಸೈಲಿಂಗ್ಗೆ ಸೇರಿದಾಗಿನಿಂದ ನನ್ನ ಮಾರ್ಗದರ್ಶಕರೇ ನನ್ನ ಶಿಕ್ಷಣದ ಅಗತ್ಯತೆ, ಪೌಷ್ಟಿಕಾಂಶ ಮತ್ತು ಇತರ ಅಗತ್ಯಗಳ ಬಗ್ಗೆ ಕಾಳಜಿವಹಿಸಿದರು.