ಹೈದರಾಬಾದ್: ಬಡ ಹಾಗೂ ನಿರ್ಗತಿಕ ಸಮುದಾಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಇಲ್ಲಿನ ವೈದ್ಯರೊಬ್ಬರು ಕೇವಲ 10 ರೂಪಾಯಿ ಫೀಸ್ ಪಡೆದು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಹೈದರಾಬಾದಿನ ಬೋಡುಪ್ಪಾಲನಲ್ಲಿರುವ ತಮ್ಮ ಕ್ಲಿನಿಕ್ನಲ್ಲಿ ವೈದ್ಯ ವಿಕ್ಟರ್ ಎಮ್ಯಾನ್ಯುಯೆಲ್ 2018 ರಿಂದಲೂ ರೋಗಿಗಳಿಗೆ ಕೇವಲ 10 ರೂಪಾಯಿ ಫೀಸ್ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ಬಿಳಿ ರೇಷನ್ ಕಾರ್ಡ್ ಅಥವಾ ಆಹಾರ ಸುರಕ್ಷತಾ ಕಾರ್ಡ್ ಹೊಂದಿರುವ ಬಡವರಿಗೆ ಈ ವೈದ್ಯರು ಕೇವಲ 10 ರೂಪಾಯಿ ಶುಲ್ಕ ವಿಧಿಸುತ್ತಾರೆ. ಅಲ್ಲದೇ ಸೈನ್ಯದಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಇವರ ಬಳಿ ಟ್ರೀಟಮೆಂಟ್ ಸಂಪೂರ್ಣ ಫ್ರೀ.
ತಮ್ಮ ಸೇವೆಯ ಬಗ್ಗೆ ವರದಿಗಾರರಿಗೆ ಮಾಹಿತಿ ನೀಡಿದ ಡಾ. ವಿಕ್ಟರ್ ಎಮ್ಯಾನ್ಯುಯೆಲ್, "ಆರ್ಥಿಕ ದುರ್ಬಲ ವರ್ಗದವರಿಗಾಗಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವುದಕ್ಕಾಗಿಯೇ ನಾನು ಈ ಕ್ಲಿನಿಕ್ ಪ್ರಾರಂಭಿಸಿದ್ದೆ. ಬಿಳಿ ರೇಷನ್ ಕಾರ್ಡ್ ಅಥವಾ ಆಹಾರ ಸುರಕ್ಷತಾ ಕಾರ್ಡ್ ಹೊಂದಿದವರಿಗೆ ನಾವು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ರೈತರು, ಆ್ಯಸಿಡ್ ದಾಳಿಗೊಳಗಾದವರು, ಅನಾಥರು, ವಿಕಲಚೇತನರು ಹಾಗೂ ಯೋಧರು, ಅವರ ಕುಟುಂಬಸ್ಥರಿಗೆ ಕೂಡ ಇದೇ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ." ಎಂದು ತಿಳಿಸಿದರು.
ಕಳೆದೊಂದು ವರ್ಷದಲ್ಲಿ ಸುಮಾರು 20 ರಿಂದ 25 ಸಾವಿರ ಕೋವಿಡ್ ಪೀಡಿತರಿಗೆ ಚಿಕಿತ್ಸೆ
ವಿವಿಧ ಕಾಯಿಲೆಗಳ ಪತ್ತೆಗೆ ಮಾಡಬೇಕಾದ ವೈದ್ಯಕೀಯ ಪರೀಕ್ಷೆಗಳು ಹಾಗೂ ಔಷಧಿಗಳು ಸಹ ಬಡವರ ಕೈಗೆಟುಕುವಂತೆ ಮಾಡಲು ಇವರು ಶ್ರಮಿಸುತ್ತಿದ್ದಾರೆ. ಡಯಾಬಿಟೀಸ್, ಹೃದಯ ಕಾಯಿಲೆ, ನರರೋಗ ಸೇರಿದಂತೆ ಇತರ ಎಲ್ಲ ಸಾಮಾನ್ಯ ಕಾಯಿಲೆಗಳಿಗೂ ಇವರು ಔಷಧಿ ನೀಡುತ್ತಾರೆ. ಸದ್ಯ ಪ್ರತಿದಿನ ಕ್ಲಿನಿಕ್ನಲ್ಲಿ ಸುಮಾರು 100 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಹೆಚ್ಚಾಗಿದ್ದ ಸಮಯದಲ್ಲಿ ಇವರು ಒಂದು ದಿನಕ್ಕೆ 140 ರೋಗಿಗಳಿಗೆ ಟ್ರೀಟಮೆಂಟ್ ನೀಡಿದ್ದಾರೆ.