ಹೈದರಾಬಾದ್ (ತೆಲಂಗಾಣ): ಮನೆಯೊಂದರಲ್ಲಿ ನಾಯಿ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿ ಡೆಲಿವರಿ ಏಜೆಂಟ್‌ಯೊಬ್ಬರು ಕಾಲು ಜಾರಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆದಿದೆ. ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಲ್ಲಿನ ಮಣಿಕೊಂಡ ಪ್ರದೇಶದ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಈ ಘಟನೆ ಮಧ್ಯಾಹ್ನ ನಡೆದಿದೆ. ಇಲ್ಲಿನ ಮನೆಯೊಂದಕ್ಕೆ 30 ವರ್ಷದ ಇಲಿಯಾಸ್ ಎಂಬ ಏಜೆಂಟ್ವೊಬ್ಬರು ಹಾಸಿಗೆಯನ್ನು ಡೆಲಿವರಿ ಮಾಡಲು ಬಂದಿದ್ದರು. ಈ ವೇಳೆ 'ಡೋಬರ್‌ಮ್ಯಾನ್' ಸಾಕು ನಾಯಿ ಆತನನ್ನು ಕಂಡ ತಕ್ಷಣ ಬಾಗಿಲಲ್ಲಿ ಬೊಗಳಲು ಪ್ರಾರಂಭಿಸಿದೆ. ಈ ವೇಳೆ ಬಾಗಿಲು ಭಾಗಶಃ ತೆರೆದಿದ್ದರಿಂದ ಆ ನಾಯಿ ನೇರವಾಗಿ ದಾಳಿ ಮಾಡಿದೆ. ಇದರಿಂದ ಬಚಾವ್ ಆಗಲು ಆತ ಪ್ಯಾರಪೆಟ್ ವಾಲ್ನಿಂದ ಆತ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಕನ ಕಚ್ಚಿ ತಿಂದ ಬೀದಿ ನಾಯಿಗಳು: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಆಗ ತಕ್ಷಣವೇ ಮನೆಯ ಮಾಲೀಕರು ಮತ್ತು ಇತರ ನಿವಾಸಿಗಳು ಡೆಲಿವರಿ ಏಜೆಂಟ್ನನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ ಮೂರನೇ ಮಹಡಿಯಿಂದ ಕಾಲು ಜಾರಿ ಕೆಳಗಡೆ ಬಿದ್ದಿದ್ದಾನೆ. ಇದರಿಂದ ಗಂಭೀರವಾಗಿ ಆತ ಗಾಯಗೊಂಡಿದ್ದು, ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ಆತನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಮೆಹದಿಪಟ್ಟಣಂನ ಆಸ್ಪತ್ರೆಯಲ್ಲಿ ಈತನಿಗೆ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 289ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿಕಿತ್ಸೆಯ ವೆಚ್ಚ ಭರಿಸಲು ಆಗ್ರಹ: ಮತ್ತೊಂದೆಡೆ, ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿದ್ದು, ನಾಯಿ ಮಾಲೀಕರೇ ಸಂತ್ರಸ್ತ ಏಜೆಂಟ್ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿದೆ. ಅಲ್ಲದೇ, ಶ್ವಾನಗಳು ಜನಸ್ನೇಹಿ ಅಥವಾ ಅಲ್ಲವೋ ಎಂಬುವುದು ಗೊತ್ತಿರುವುದಿಲ್ಲ. ಹೀಗಾಗಿ ವಸ್ತುಗಳು ಡೆಲಿವರಿ ಮಾಡಲು ಯಾವುದೇ ಏಜೆಂಟ್ಗಳು ಬಂದಾಗ ಮನೆಯ ಮಾಲೀಕರು ತಮ್ಮ ಶ್ವಾನಗಳನ್ನು ಕಟ್ಟಿ ಹಾಕಬೇಕೆಂದು ಸಂಘವು ಮನವಿ ಮಾಡಿದೆ.
ತೆಲಂಗಾಣ ರಾಜ್ಯಾದ್ಯಂತ ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ದಾಳಿಗೆ ಮಕ್ಕಳು ಬಲಿಯಾಗಿದ್ದಾರೆ. ಅಲ್ಲದೇ, ಅನೇಕ ಘಟನೆಗಳಲ್ಲಿ ನಾಯಿಗಳು ಕಚ್ಚಿ ಜನರು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗುತ್ತಲೇ ಇವೆ. ಆದರೆ, ಇದೀಗ ಸಾಕು ನಾಯಿಗಳ ದಾಳಿಯಿಂದಲೂ ಜನರು ಗಾಯಗೊಂಡ ಪ್ರಕರಣಗಳು ಪ್ರಕರಣ ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದೆ ಬಂಜಾರಾಹಿಲ್ಸ್‌ನ ಯೂಸಫ್‌ಗುಡಾದಲ್ಲಿಯೂ ಸಾಕು ನಾಯಿಯ ದಾಳಿಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಹೀಗಾಗಿ ತಮ್ಮ ಪ್ಲಾಟ್‌ಗಳಲ್ಲಿ ಸಾಕು ನಾಯಿಗಳನ್ನು ಸಾಕುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ಸೂಚಿಸಿದ್ದಾರೆ.
ಇದನ್ನೂ ಓದಿ:ವೈದ್ಯಕೀಯ ವಿವಿ ಕ್ಯಾಂಪಸ್‌ನಲ್ಲಿ ವೈದ್ಯರು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ