ಹೈದರಾಬಾದ್ (ತೆಲಂಗಾಣ): ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್ಎಂಸಿ) ಚುನಾವಣೆಯ ಪ್ರಚಾರ ಜೋರಾಗಿದೆ. ಬಿಜೆಪಿ ವತಿಯಿಂದ ಇಂದು ಭರ್ಜರಿ ರೋಡ್ ಶೋ ನಡೆಸಲಾಯಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಭ್ಯರ್ಥಿ ಪರವಾಗಿ ಇಂದು ಮತಯಾಚನೆ ಮಾಡಿದರು. ಹಲವಡೆ ಪಕ್ಷದ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದ ಅವರು, ಹೈದರಾಬಾದ್ ಮರುನಾಮಕರಣ ಬಗ್ಗೆ ಮತ್ತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ನನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದಿದ್ದಾರೆ.
ಹೈದರಾಬಾದ್ನ ಮರುನಾಮಕರಣದ ಬಗ್ಗೆ ನನ್ನನ್ನು ಹಲವರು ಕೇಳುತ್ತಲೇ ಇದ್ದಾರೆ. ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬಹುದೇ ಎಂದು ಇತ್ತೀಚೆಗೂ ಈ ಬಗ್ಗೆ ನನ್ನನ್ನು ಒಬ್ಬರು ಪ್ರಶ್ನಿಸಿದರು. ಅದಕ್ಕೆ ನಾನು ಏಕೆ ಮಾಡಬಾರದು ಎಂದಿದ್ದೇನೆ. ಹೈದರಾಬಾದ್ನಲ್ಲಿ ಈ ಸಾರಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೆ ಆ ಹೆಸರನ್ನು ತೆಗೆದುಹಾಕಿ ಅದರ ಬದಲು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಪ್ರಚಾರ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್ನಲ್ಲಿ ಬಿಜೆಪಿ ಪರ ಯುಪಿ ಸಿಎಂ ಕ್ಯಾಂಪೇನ್
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದ್ದೇವೆ. ಅದರಂತೆ ಹೈದರಾಬಾದ್ನಲ್ಲಿ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸುತ್ತಾ ಅದರ ಮರುನಾಮಕರಣ ಶತಸಿದ್ಧ ಅನ್ನೋದನ್ನು ಮತ್ತೊಮ್ಮೆ ಪುನರುಚ್ಚರಿಸಿದರು.
ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಿಎಂ ಯೋಗಿ ಆದಿತ್ಯನಾಥ್