ಹೈದರಾಬಾದ್(ತೆಲಂಗಾಣ):ಕಳೆದ ಕೆಲ ವಾರಗಳಿಂದ ತೆಲಂಗಾಣದಲ್ಲಿ ಮೇಲಿಂದ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ನಾಲ್ಕು ದಿನಗಳ ಹಿಂದೆಯಷ್ಟೇ ಜುಬುಲಿ ಹಿಲ್ಸ್ನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ರೇಪ್ ಕೇಸ್ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಮತ್ತೆ ಮೂರು ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳ ಹಿಂದೆ ಸಿಕಂದರಾಬಾದ್ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಐವರು ಕಾಮುಕರು ಭಾಗಿಯಾಗಿದ್ದಾಗಿ ವರದಿಯಾಗಿದೆ.
ಸಿಕಂದರಾಬಾದ್ನ ಕಾರ್ಖಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತ ಸೇರಿಕೊಂಡಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಿದ್ದಂತೆ ಆಕೆಯನ್ನ ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಈ ವೇಳೆ ತನ್ನ ಮೇಲೆ ಗ್ಯಾಂಗ್ರೇಪ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮೇ 30ರಂದು ದೂರು ದಾಖಲು ಮಾಡಲಾಗಿತ್ತು.