ದೊರ್ನಿಪಾಡು(ಆಂಧ್ರ ಪ್ರದೇಶ): ನಂದ್ಯಾಲ ಜಿಲ್ಲೆಯ ದೊರ್ನಿಪಾಡು ಮಂಡಲದ ಯುವಕನೊಬ್ಬ ಮೂವರು ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ತಾಯಿಯೂ ಮಗನಿಗೆ ಸಾಥ್ ನೀಡಿರುವುದಾಗಿ ದೊರ್ನಿಪಾಡು ಪೊಲೀಸ್ ಠಾಣಾ ಎಸ್‌ಐ ತಿರುಪಾಲ್ ಗುರುವಾರ ತಿಳಿಸಿದ್ದಾರೆ.
ಆರೋಪಿ ಚಾಕರಾಜುವೆಮುಲ ಗ್ರಾಮದ ಮಹೇಂದ್ರ ಬಾಬು ಮಾರ್ಕಾಪುರದ ಮಹಿಳೆಯನ್ನು ವಿವಾಹವಾಗಿದ್ದನು. ತನಗೆ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು, ತನ್ನ ಗ್ರಾಮದ ಮತ್ತೊಬ್ಬ ಮಹಿಳೆಯನ್ನು ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದಾನೆ. ಎರಡನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ ಆಕೆಗೆ ಸಂಬಂಧಿಸಿದ ವಿಮೆ ಹಣ ಬರುತ್ತದೆ ಎಂದು ತಾಯಿ ಬಳಿ ಚರ್ಚಿಸಿದ್ದಾನೆ. ನಂತರ ತಾಯಿ ಹಾಗೂ ಮಗ ಸೇರಿಕೊಂಡು ಎರಡನೇ ಹೆಂಡತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದು ಆಕೆ ಹೈದರಾಬಾದ್ಗೆ ಹೊರಟು ಹೋಗಿದ್ದಳು.