ಜಾಜ್ಪುರ(ಒಡಿಶಾ):ರಾಮಾಯಣದ ಶ್ರೀರಾಮಚಂದ್ರ ವನವಾಸದ ಸಮಯ ತನ್ನ ಮಡದಿ ಸೀತೆಯನ್ನು ಅಪಹರಿಸಿದ ರಾವಣನ ಜೊತೆಗೇ ಯುದ್ಧ ಮಾಡಿದ್ದನು. ತನ್ನ ಮಡದಿ ಮೇಲಿನ ಪ್ರೀತಿಗೆ ಶ್ರೀರಾಮಚಂದ್ರ ಹತ್ತು ತಲೆಯ ರಾವಣನನ್ನೇ ಸಂಹರಿಸಿದ್ದನು. ದ್ವಾಪರಯುಗದ ರಾಮ ಮಡದಿಗಾಗಿ ಕಾಡೆಲ್ಲಾ ಅಲೆದರೆ ಇಲ್ಲೊಬ್ಬ ಕಲಿಯುಗದ ರಾಮಚಂದ್ರ ಹೆಂಡತಿ ಮೇಲಿನ ಕೋಪಕ್ಕೆ ಅನ್ನ ತಿನ್ನುವುದನ್ನೇ ಬಿಟ್ಟಿದ್ದಾನಂತೆ.
ಮೊದಲು ಸುಖಿ ಸಂಸಾರ.. ಆಶ್ಚರ್ಯವಾದರೂ ಇದು ಸತ್ಯ ಘಟನೆ. ಒಡಿಶಾ ರಾಜ್ಯದ ಶ್ರೀರಾಮಚಂದ್ರ ಸೀತಾ ದಂಪತಿಯ ಕತೆಯಿದು. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲಿ ಗಂಡ ಹೆಂಡತಿಯ ಜಗಳದಿಂದ ಜಾಜ್ಪುರ ಜಿಲ್ಲೆಯ ಭಿಕಿಪುರ ಗ್ರಾಮದಲ್ಲಿ ವಾಸಿಸುವ ರಾಮಚಂದ್ರ ಎನ್ನುವವರು ಒಂದು ದಿನ, ಎರಡು ದಿನವಲ್ಲ ಬರೋಬ್ಬರಿ 42 ವರ್ಷಗಳಿಂದ ಅನ್ನ ತಿನ್ನುವುದನ್ನೇ ಬಿಟ್ಟಿದ್ದಾರೆ. ಈ ರಾಮಚಂದ್ರನ ಹೆಂಡತಿಯ ಹೆಸರು ಸೀತಾ. 54 ವರ್ಷಗಳ ಹಿಂದೆ ರಾಮಚಂದ್ರ ಹಾಗೂ ಸೀತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 12 ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದ ರಾಮಚಂದ್ರ ಅವರು ಹೆಂಡತಿ ಜೊತೆ ಮುನಿಸಿಕೊಂಡು ತಾವಿದ್ದ ಮನೆಯಿಂದ ಸ್ವಲ್ಪ ದೂರದಲ್ಲೊಂದು ಗುಡಿಸಲು ಕಟ್ಟಿಕೊಂಡು ಅದರಲ್ಲೇ ವಾಸಿಸುತ್ತಿದ್ದಾರೆ.
ರಾಮಚಂದ್ರ ಅವರಿಗೆ ಈ 76ರ ವೃದ್ಧಾಪ್ಯ. 54 ವರ್ಷಗಳ ಹಿಂದೆ ರಾಮಚಂದ್ರ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಮಡದಿ ಸೀತಾ ಅವರು ಜೀವನಕ್ಕಾಗಿ ಒಣ ಮೀನು ಮಾರಾಟ ಮಾಡುತ್ತಿದ್ದರು. 22ನೇ ವಯಸ್ಸಿಗೆ ಮದುವೆಯಾಗಿದ್ದ ರಾಮಚಂದ್ರ ಅವರದ್ದು ಪತ್ನಿ, ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಒಳಗೊಂಡ ಸುಖಿ ಸಂಸಾರವಾಗಿತ್ತು. ಇಬ್ಬರ ದುಡಿಮೆಯಲ್ಲಿ ಅವರ ಸಂಸಾರ ಸಾಗುತ್ತಿತ್ತು. ಎಂದಿನಂತೆ ಒಂದು ದಿನ ರಾಮಚಂದ್ರ ಅವರು ಕೆಲಸಕ್ಕೆಂದು ಹೊರಗಡೆ ಹೋಗಿದ್ದರು. ಪ್ರತಿದಿನದಂತೆಯೇ ಆ ದಿನವೂ ಹೆಂಡತಿ ಸೀತಾ ಜೊತೆ ತಾನು ಕೆಲಸದಿಂದ ಹಿಂತಿರುಗಿ ಬರುವಾಗ ಅಡುಗೆ ತಯಾರಿಸಿಡಲು ಹೇಳಿದ್ದರು.
ತಾಳ್ಮೆ ಕಳೆದುಕೊಂಡಿದ್ದ ರಾಮಚಂದ್ರ.. ದುರದೃಷ್ಟಕ್ಕೆ ಆ ದಿನ ಸೀತಾ ಅವರು ಜ್ವರದಿಂದ ಬಳಲುತ್ತಿದ್ದ ಕಾರಣ ಗಂಡ ಕೆಲಸದಿಂದ ಹಿಂತಿರುಗೋ ಹೊತ್ತಿಗೆ ಅಡುಗೆ ಮಾಡಿಡಲು ಸಾಧ್ಯವಾಗಿರಲಿಲ್ಲ. ಮನೆಗೆ ಹಿಂತಿರುಗಿದ ರಾಮಚಂದ್ರ ಅವರು ಮಡದಿ ಜೊತೆ ಮನೆಯಲ್ಲಿ ಅಡುಗೆ ಸಿದ್ಧವಾಗಿಲ್ಲದೇ ಇರುವುದನ್ನು ಕಂಡು ಕೋಪಗೊಂಡಿದ್ದರು. ತಮ್ಮ ತಾಳ್ಮೆ ಕಳೆದುಕೊಂಡು ಪತ್ನಿ ಜೊತೆ ಜಗಳವಾಡಿದ್ದರು. ಆ ದಿನ ಕೋಪದಲ್ಲಿ ಹೆಂಡತಿಯಿಂದ ಒಂದು ಅಕ್ಕಿ ಕಾಳು ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದರಂತೆ.