ಹೈದರಾಬಾದ್ (ತೆಲಂಗಾಣ): ಪತ್ನಿ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿದ ಪತಿ ಆಕೆಯ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ನಗರದ ಚಾರ್ಮಿನಾರ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೇರೊಬ್ಬ ಪುರುಷನೊಂದಿಗೆ ಪತ್ನಿ ವಿವಸ್ತ್ರಗೊಂಡಿರುವುದನ್ನು ಕಂಡಿರುವ ಆತ ಮೊದಲು ದೊಣ್ಣೆಯಿಂದ ಹಲ್ಲೆ ನಡೆಸಿ ಬಳಿಕ ಗುಪ್ತಾಂಗಕ್ಕೆ ಮದ್ಯ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಪತ್ನಿ ಸಾವನ್ನಪ್ಪಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತುಳಜಪ್ಪ ಎಂದು ಗುರುತಿಸಲಾಗಿದೆ.
ಬಹದ್ದೂರ್‌ಪುರದ ಪೊಲೀಸ್ ಇನ್ಸ್ಪೆಕ್ಟರ್ ಸುಧಾಕರ್ ಪ್ರತಿಕ್ರಿಯಿಸಿ, "ಮೈಲಾರ್ದೇವುಪಲ್ಲಿ ಉದಂಗಡ್ಡ ಬಡಾವಣೆಯ ತುಳಜಪ್ಪ ಎಂಬಾತ ಬಹದ್ದೂರ್‌ಪುರದ ವೈನ್‌ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಪತ್ನಿ (ವಯಸ್ಸು 45) ದಿನಗೂಲಿ ಕಾರ್ಮಿಕರಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಹದ್ದೂರ್‌ಪುರ ಪ್ರದೇಶದಲ್ಲಿ ವೇಸ್ಟ್ ಪೇಪರ್ ಸಂಗ್ರಹಿಸಿ ಮಾರಾಟ ಮಾಡುವ ಕೆಲಸಗಾರನ ಜತೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಗೆ ಹಲವು ಬಾರಿ ತುಳಜಪ್ಪ ಎಚ್ಚರಿಕೆ ನೀಡಿದ್ದಾನೆ."
"ಅಲ್ಲದೇ, ಇದೇ ತಿಂಗಳ 10ರಂದು ರಾತ್ರಿ ಮನೆಯಿಂದ ಹೊರಹೋಗಿದ್ದ ಪತ್ನಿ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಮತ್ತಷ್ಟು ಅನುಮಾನಗೊಂಡ ತುಳಜಪ್ಪ ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿ ಇಲ್ಲಿಯ ಮೂಸಿ ದರ್ಗಾ ಬಳಿಯ ಗುಡಿಸಲಿಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿ ವೇಸ್ಟ್ ಪೇಪರ್ ಮಾರುವ ಕೆಲಸಗಾರನ ಪತ್ನಿ ವಿವಸ್ತ್ರಳಾಗಿರುವುದು ಕಂಡುಬಂದಿದೆ. ಇದರಿಂದ ಕುಪಿತಗೊಂಡು ದುಷ್ಕೃತ್ಯ ಎಸಗಿದ್ದಾನೆ. ತೀವ್ರ ಸುಟ್ಟ ಗಾಯಗಳಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಬಹದ್ದೂರ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ" ಎಂದು ಹೇಳಿದರು.
ಮಕ್ಕಳೆದುರೇ ಹೆಂಡತಿಗೆ ಬೆಂಕಿ:ಕೆಲದಿನಗಳ ಹಿಂದೆ ತೆಲಂಗಾಣದ ಮೆಡ್ಚಲ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದರಲ್ಲಿ ಪತಿ ತನ್ನ ಹೆಂಡತಿಗೆ ಮಕ್ಕಳೆದುರೇ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ 20 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನವ್ಯಶ್ರೀ ಎಂದು ಗುರುತಿಸಲಾಗಿದೆ. ಪತಿ ತಿರುನಗರಿ ನರೇಂದ್ರ ದುಷ್ಕೃತ್ಯ ಎಸಗಿದ್ದ. ನರೇಂದ್ರ ಮತ್ತು ಪತ್ನಿ ನವ್ಯಶ್ರೀ ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಯಾಗುತ್ತಿದ್ದವು. ಕೆಲವು ದಿನಗಳ ಹಿಂದೆ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದರಿಂದ ಕುಪಿತನಾದ ನರೇಂದ್ರ ಪತ್ನಿ ಮೇಲೆ ಸ್ಯಾನಿಟೈಸರ್ ಸುರಿದು ಮಕ್ಕಳ ಎದುರೇ ಬೆಂಕಿ ಹಚ್ಚಿದ್ದಾನೆ. ಗಾಯಾಳು ನವ್ಯಶ್ರೀ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಮಕ್ಕಳೆದುರಲ್ಲೇ ಹೆಂಡತಿಗೆ ಬೆಂಕಿ ಹಚ್ಚಿದ ಪಾಪಿ ಪತಿ.. ನರಳಿ ನರಳಿ ಪ್ರಾಣ ಬಿಟ್ಟ ಪತ್ನಿ