ನವದೆಹಲಿ:ದಕ್ಷಿಣ ದಿಲ್ಲಿಯ ನೆಬ್ ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಎನ್‌ಕ್ಲೇವ್‌ನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯನ್ನು ಪತಿ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ದೆಹಲಿ ಪೊಲೀಸರ ಪ್ರಕಾರ ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ವ್ಯಕ್ತಿಯೊಬ್ಬರು ಬೆಳಗ್ಗೆ 6.24ಕ್ಕೆ ಪಿಸಿಆರ್ಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದರು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪಿಸಿಆರ್ಗೆ ಕರೆ ಬಂದಾಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿತು. ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ದೇಹವಿತ್ತು. ಅವರ ಕುತ್ತಿಗೆಯಲ್ಲಿ ಹಲವು ಗಾಯಗಳ ಗುರುತುಗಳಿದ್ದವು. ಅಲ್ಲದೆ 30 ವರ್ಷದ ಮಗಳು ಮತ್ತು 28 ವರ್ಷದ ಮಗ ಸಹ ಈ ಘಟನೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಂದೆ ವಿಜಯ್ ವೀರ್ ಎಂಬುವರು ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಆರೋಪಿ ಪತಿ ವಿಜಯ್ ವೀರ್ ಕೂಡ ಇದ್ದರು. ಅವರ ಎಡಗೈಗೂ ಗಾಯವಾಗಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧ: ವಿಚಾರಣೆ ವೇಳೆ ಸುಮನ್ (ಮೃತ) ಆರೋಪಿ ವಿಜಯ್ ವೀರ್ ನನ್ನು 1992ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾನೆ. ವಿಜಯ್ ವೀರ್ ಗರ್ಮುಕ್ತೇಶ್ವರ ಯುಪಿ ನಿವಾಸಿ. ಮದುವೆಯ ನಂತರ ಅವರು ನೆಬ್ ಸರೈನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ವಿಜಯ್ ವಿವಾಹೇತರ ಸಂಬಂಧ ಹೊಂದಿದ್ದು, ಕುಟುಂಬದತ್ತ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಹೆಂಡತಿ ಆತನನ್ನು ವಿರೋಧಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ವಿಜಯ್ ವೀರ್ ಪತ್ನಿಗೆ ಚಿತ್ರಹಿಂಸೆ ನೀಡಿ ಥಳಿಸುತ್ತಿದ್ದ. ಮಕ್ಕಳಿಬ್ಬರೂ ತಾಯಿಗೆ ಆಸರೆಯಾಗುತ್ತಿದ್ದರು. ಹೀಗಾಗಿ ವಿಜಯ್ ವೀರ್ ತಮ್ಮ ಮಕ್ಕಳ ಮೇಲೂ ದೌರ್ಜನ್ಯ ತೋರುತ್ತಿದ್ದನು ಎಂದು ತನಿಖೆ ವೇಳೆ ತಿಳಿದುಬಂದಿದೆ.