ಜಲಂಧರ್ (ಪಂಜಾಬ್):ವ್ಯಕ್ತಿಯೋರ್ವ ತನ್ನ ಅತ್ತೆ - ಮಾವನ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಪಂಜಾಬ್ನ ಜಲಂಧರ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಪರಮ್‌ಜಿತ್ ಕೌರ್, ಆಕೆಯ ತಂದೆ ಸುರ್ಜನ್ ಸಿಂಗ್, ತಾಯಿ ಜೋಗಿಂದ್ರೋ ದೇವಿ ಮತ್ತು ಇಬ್ಬರು ಮಕ್ಕಳಾದ ಗುಲ್‌ಮೊಹರ್ ಮತ್ತು ಅರ್ಷದೀಪ್ ಎಂದು ಗುರುತಿಸಲಾಗಿದೆ. ಆರೋಪಿ ಕುಲದೀಪ್ ಸಿಂಗ್ ಎಂಬಾತನೇ ಮನೆಗೆ ಬೆಂಕಿ ಹಚ್ಚಿದ ಪಾಪಿಯಾಗಿದ್ದು, ಸದ್ಯಕ್ಕೆ ಈತ ಮತ್ತು ಈತನ ಸಹಚರರು ತಲೆ ಮರೆಸಿಕೊಂಡಿದ್ದಾರೆ.
ಇದನ್ನೂ ಓದಿ:ಪಾಕ್, ಕೆನಡಾ ಸೇರಿ ವಿದೇಶದಿಂದಲೇ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿರುವ ಭಾರತದ ಗ್ಯಾಂಗ್ ಲೀಡರ್ಗಳು: ಎನ್ಐಎ
ಎರಡನೇ ಮದುವೆಯಾಗಿದ್ದ ಮಹಿಳೆ: ಮೃತ ಮಹಿಳೆ ಪರಮ್‌ಜಿತ್ ಕೌರ್, ಕುಲದೀಪ್ ಸಿಂಗ್ನೊಂದಿಗೆ ಎರಡನೇ ಮದುವೆಯಾಗಿದ್ದರು. ಈ ಹಿಂದೆ ಮೊದಲ ಮದುವೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳು ಇದ್ದರು. ಮೊದಲ ಮದುವೆಯಿಂದ ಪಡೆದ ಮಕ್ಕಳನ್ನು ಬಿಟ್ಟು ಬರುವಂತೆ ಕುಲದೀಪ್ ಸಿಂಗ್ ಕಿರುಕುಳ ನೀಡುತ್ತಿದ್ದ. ಅಲ್ಲದೇ, ಕೌರ್ ಮತ್ತು ಆಕೆ ಮಕ್ಕಳನ್ನು ಥಳಿಸುತ್ತಿದ್ದರು.
ಈ ಕಿರುಕುಳದಿಂದ ಬೇಸತ್ತಿದ್ದ ಪರಮ್‌ಜಿತ್ ಕೌರ್ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಐದಾರು ತಿಂಗಳಿನಿಂದ ತವರು ಮನೆಗೆ ಬಂದು ವಾಸಿಸುತ್ತಿದ್ದರು. ಆದರೂ, ಆರೋಪಿ ಪತಿ ಮಕ್ಕಳನ್ನು ಅಲ್ಲೇ ಬಿಟ್ಟು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದ. ಆಕೆ ಮಕ್ಕಳು ಬಿಟ್ಟು ಹೋಗಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ತನ್ನ ಕೆಲವು ಸಹಚರರೊಂದಿಗೆ ಕೂಡಿಕೊಂಡು ಬೆಳಗಿನ ಜಾವ ಮನೆಗೆ ಹೊರಗಿನಿಂದ ಬೀಗ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ!