ಲಖನೌ: ತ್ರಿವಳಿ ತಲಾಖ್ ಮತ್ತೆ ಸದ್ದು ಮಾಡ್ತಿದೆ. ಕೆಲ ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿ ಮಧ್ಯೆ ತ್ರಿವಳಿ ತಲಾಖ್ ಸಮಸ್ಯೆ ಉಲ್ಬಣಗೊಂಡಿದೆ. ರಾಜಧಾನಿಯ ಗೋಮತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ನೊಂದ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಏನಿದು ಘಟನೆ?: ಕರೀಂ ಖಾನ್ ಅವರ ಮಗ ಮಕ್ಬೂಲ್ ಖಾನ್ ಅವರೊಂದಿಗೆ ಪಂಚನನ್ ನಗರ ತಲೋಜಾ ಫೇಸ್ ಒನ್ ನವಿ ಮುಂಬೈನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಸಂತ್ರಸ್ತೆ ವಿವಾಹವಾಗಿದ್ದರು. ಮದುವೆಯಲ್ಲಿ ಮಕ್ಬೂಲ್ ಖಾನ್ ಅವರ ಬೇಡಿಕೆಯಂತೆ ಸಂತ್ರಸ್ತೆ ತಂದೆ 12 ಲಕ್ಷದ 50 ಸಾವಿರ ರೂಪಾಯಿ ವರದಕ್ಷಿಣೆ ನೀಡಿದ್ದಾರೆ. ನಂತರವೂ ಪತಿ ಕರೀಂ ಮತ್ತು ಅವರ ಕುಟುಂಬದವರು ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದರು. ನೀನು ಕಡಿಮೆ ವರದಕ್ಷಿಣೆ ತಂದಿದ್ದೀಯಾ ಅಂತಾ ಸಂತ್ರಸ್ತೆ ಅತ್ತೆ ಗೇಲಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಗಂಡನ ಕುಟುಂಬಸ್ಥರು ಮತ್ತಷ್ಟು ಹಣ ತರುವಂತೆ ಸಂತ್ರಸ್ತೆಗೆ ಒತ್ತಾಯಿಸುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಓದಿ:ಬೈಕ್ ಕೊಡಿಸಲಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ ಪತಿ : ದೂರು ದಾಖಲಿಸಿದ ಗರ್ಭಿಣಿ
ಇದೇ ವೇಳೆ, ಪತಿ ಕರೀಂ ಉದ್ಯೋಗ ನಿಮಿತ್ತ ಜರ್ಮನಿಗೆ ತೆರಳಿದ್ದರು. ನಂತರ ಅತ್ತೆ ಸಂತ್ರಸ್ತೆಯನ್ನು ಥಳಿಸಿ ತನ್ನ ತಾಯಿಯ ಮನೆಗೆ ಕಳುಹಿಸಿದ್ದಾರೆ. ಏಪ್ರಿಲ್ 16 ರಂದು ಕರೀಂ ತ್ರಿವಳಿ ತಲಾಖ್ ಪತ್ರ ಬರೆದು ಸಂತ್ರಸ್ತೆಯ ಮನೆಗೆ ಪೋಸ್ಟ್ ಮಾಡಿದ್ದಾನೆ. ಹೀಗಾಗಿ ನವ ದಂಪತಿ ಸಂಬಂಧ ಮುರಿದುಬಿದ್ದಿದೆ.
ಕುಟುಂಬಸ್ಥರ ಸಂಧಾನ ವಿಫಲ:ಸಂತ್ರಸ್ತೆಯ ಕುಟುಂಬಸ್ಥರು ಈ ಸಂಬಂಧ ಮುರಿದು ಬೀಳಬಾರದೆಂದು ಪ್ರಯತ್ನಪಟ್ಟರೂ ಪ್ರಯೋಜವಾಗಿಲ್ಲ. ಗಂಡ ಮತ್ತು ಆತನ ಕುಟುಂಬಸ್ಥರನ್ನು ಮನವೋಲಿಸಲು ಸಂತ್ರಸ್ತೆಯ ಕುಟುಂಬ ಎಷ್ಟೇ ಪ್ರಯತ್ನಿಸಿದರೂ ಉಪಯೋಗವಾಗಲಿಲ್ಲ. ಹೀಗಾಗಿ ಸಂತ್ರಸ್ತೆಯ ಕುಟುಂಬ ವಿಭೂತಿ ಖಂಡ್ ಪೊಲೀಸ್ ಠಾಣೆಗೆ ತೆರಳಿ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾರೆ.
ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು:ಗಂಡನ ಕುಟುಂಬಸ್ಥರು ನನ್ನನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾರೆ. ಅಲ್ಲದೇ ವರದಕ್ಷಿಣೆಗೂ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಾಗ ಪತಿಯಿಂದ ತ್ರಿವಳಿ ತಲಾಖ್ ಎಂಬ ಪತ್ರ ಬಂದಿದೆ. ಈ ಮೂಲಕ ಗಂಡನ ನನ್ನ ಸಂಬಂಧವನ್ನು ಕಡಿದುಕೊಂಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ಸ್ವೀಕರಿಸಲಾಗಿದೆ. ಇದನ್ನು ಗಣನೆಗೆ ತೆಗೆದುಕೊಂಡು ಕಲಂ 498A, 504, ವರದಕ್ಷಿಣೆ ನಿಷೇಧ ಕಾಯಿದೆ 3, ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ರಕ್ಷಣೆ ಕಲಂ 3, ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ರಕ್ಷಣೆ ಕಾಯಿದೆ 2019 ಕಲಂ 4 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಭೂತಿ ಖಂಡ್ ಪೊಲೀಸ್ ಠಾಣೆ ಪ್ರಭಾರಿ ಆಶಿಶ್ ಮಿಶ್ರಾ ತಿಳಿಸಿದ್ದಾರೆ.