ಪ್ರತಾಪ್ಗಢ(ರಾಜಸ್ಥಾನ):ಪತ್ನಿ ಜತೆಗೂಡಿಬದುಕಿನ ಸಿಹಿ-ಕಹಿಗಳನ್ನುಂಡು ಸಂಸಾರ ನಡೆಸಬೇಕಿದ್ದ ಪತಿಯೊಬ್ಬ ವಿಕೃತಿ ಮರೆದಿದ್ದಾನೆ.ಪತ್ನಿಯ ಶೀಲದ ಬಗ್ಗೆ ಸದಾ ಅನುಮಾನ ಪಡುತ್ತಿದ್ದ ಆತ ಕಳೆದ ಮೂರು ತಿಂಗಳಿಂದ ಆಕೆಯನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿದ್ದಾನೆ. ರಾಜಸ್ಥಾನದ ಪ್ರತಾಪ್ಗಢನಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ.
ಸದಾ ಪತ್ನಿಯ ಶೀಲದ ಸಂಶಯದಿಂದ ಇರುತ್ತಿದ್ದ ಗಂಡ ಆಕೆಯನ್ನು 30 ಕೆ.ಜಿ ತೂಕದ ಕಬ್ಬಿಣದ ಸರಪಳಿಯಿಂದ ಕಟ್ಟಿದ್ದಾನೆ. ತವರು ಮನೆಗೆ ಹೋಗುತ್ತಿದ್ದ ವೇಳೆ ನನ್ನ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದು, ಸಾಕಷ್ಟು ಬಾರಿ ಹಲ್ಲೆ ಸಹ ನಡೆಸುತ್ತಿದ್ದ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ. ಇದರ ಜತೆಗೆ ತಾನು ಹೋಗುತ್ತಿದ್ದ ಸ್ಥಳಕ್ಕೆ ಸರಪಳಿಯಿಂದ ಕಟ್ಟಿಯೇ ಕರೆದುಕೊಂಡು ಹೋಗುತ್ತಿದ್ದ ಎಂದು ನೋವು ಹೇಳಿಕೊಂಡಿದ್ದಾಳೆ.
ಹೆಂಡ್ತಿಯನ್ನ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ ಗಂಡ ಮಹಿಳೆ ಹೇಳುವುದೇನು?
ನನ್ನ ತಾಯಿಗೆ ವಯಸ್ಸಾಗಿರುವ ಕಾರಣ ಆಕೆಯ ಸೇವೆ ಸಲ್ಲಿಸಲು ತವರಿಗೆ ಹೋಗುತ್ತಿದ್ದೆ. ಅಲ್ಲಿಂದ ನಾನು ವಾಪಸ್ ಆಗುತ್ತಿದ್ದಂತೆ ಮದ್ಯದ ದಾಸನಾಗಿರುತ್ತಿದ್ದ ಗಂಡ ನನ್ನ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸುತ್ತಿದ್ದ. ಅಕ್ರಮ ಸಂಬಂಧದ ಅನುಮಾನದಿಂದಾಗಿ ಕಳೆದ ಮೂರು ತಿಂಗಳಿಂದ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸಿದ್ದೇನೆ. ಆತ ನನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ ಅದರ ಕೀಲಿ ಕೈ ತೆಗೆದುಕೊಂಡು ಹೋಗುತ್ತಿದ್ದ ಎಂದು ನರಕಯಾತನೆಯನ್ನು ವಿವರಿಸಿದ್ದಾಳೆ.
ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿ ರವೀಂದ್ರ ಸಿಂಗ್, ಕಾನ್ಸ್ಟೇಬಲ್ಗಳಾದ ನೇಮಿಚಂದ್ ಹಾಗೂ ಶಿವಸಿಂಗ್ ಭೇಟಿ ನೀಡಿ, ಸದ್ಯ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.