ಮಿರ್ಜಾಪುರ (ಉತ್ತರಪ್ರದೇಶ):ಈಗಿನ ದುಬಾರಿ ದುನಿಯಾದಲ್ಲಿ ಒಂದು ಚಿಕ್ಕ ಮನೆ ಕಟ್ಟಿಕೊಳ್ಳೋದೇ ತೀರಾ ಕಷ್ಟದ ಕೆಲಸ. ಅಂಥದ್ರಲ್ಲಿ ಇಲ್ಲೊಬ್ಬ ಆಸಾಮಿ ತನ್ನ ನಾಲ್ವರು ಪತ್ನಿಯರಿಗಾಗಿ 13 ಅಂತಸ್ತಿನ ಮನೆಯನ್ನೇ ಕಟ್ಟಿಸಿದ್ದಾನೆ. ಹೀಗಿರಬೇಕಾದರೆ, 2ನೇ ಪತ್ನಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಗಲೇ ನೋಡಿ ಅಸಲಿ ಸತ್ಯ ಬಯಲಾಗಿದ್ದು. ಅಧಿಕಾರಿಗಳು ಈಗ ಮನೆಗೆ ಬೀಗ ಜಡಿದಿದ್ದಾರೆ.
ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಶ್ರುತಿಹಾರ್ ಗ್ರಾಮದ ಸಿಯಾರಾಮ್ ಪಟೇಲ್ ಈ ಮನೆಯ ಮಾಲೀಕ. ಈತನಿಗೆ ನಾಲ್ವರು ಪತ್ನಿಯರು ಮತ್ತು ಮಕ್ಕಳು ಇದ್ದಾರೆ. 22 ವರ್ಷಗಳ ಹಿಂದೆ ಸಿಯಾರಾಮ್ ಗ್ರಾಮದಲ್ಲಿ ತನ್ನ ಕುಟುಂಬಕ್ಕಾಗಿ 13 ಅಂತಸ್ತಿನ ಮನೆಯನ್ನು ಕಟ್ಟಿಸಿದ್ದ. ಇಷ್ಟು ದೊಡ್ಡ ಮನೆಯನ್ನು ಕಟ್ಟಿಸಿದ್ದು, ಗ್ರಾಮಸ್ಥರಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿರಲಿಲ್ಲ.
ದೈತ್ಯ ಮನೆಯಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಪತ್ನಿಯರು, ಮಕ್ಕಳೊಂದಿಗೆ ಪಟೇಲ್ ವಾಸವಾಗಿದ್ದ. ಇದೀಗ ಮನೆಯನ್ನು ಅವರು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಅದ್ಯಾಕೆ ಅಂತ ಯಾರಿಗೂ ಹೇಳಿರಲಿಲ್ಲ. ಈ ಮಧ್ಯೆ 2ನೇ ಪತ್ನಿ ಗಂಡನಿಂದ ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಗುಜರಾಯಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ವಿಚ್ಚೇದನವನ್ನು ಮಂಜೂರು ಮಾಡಿತ್ತು. ಅಲ್ಲದೇ, ಪತ್ನಿಗೆ ಸುಮಾರು 4 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿತ್ತು.
ಅಪಾಯದಲ್ಲಿರುವ 13 ಅಂತಸ್ತಿನ ಮನೆ 2018ರಲ್ಲಿ ಕೋರ್ಟ್ 2ನೇ ಪತ್ನಿಗೆ ವಿಚ್ಚೇದ ನೀಡಿ, ಜೀವನಾಂಶಕ್ಕೆ ಸೂಚಿಸಿತ್ತು. ಆದರೆ, ಪಟೇಲ್ 4 ವರ್ಷ ಕಳೆದರೂ ಆಕೆಗೆ ನೀಡಬೇಕಿದ್ದ ಜೀವನಾಂಶ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ವಿಚ್ಚೇದಿತ ಪತ್ನಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ಅದಾಗಲೇ ನೋಡಿ ಈ ದೈತ್ಯ ಮನೆ ಸತ್ಯ ಹೊರಬಿದ್ದಿದ್ದು.
ಅಕ್ರಮ ಜಾಗದಲ್ಲಿ ಮನೆ ನಿರ್ಮಾಣ:ಸಿಯಾರಾಮ್ ಅವರ ಎರಡನೇ ಪತ್ನಿ ಅರ್ಚನಾ ಅವರು ಪತಿ ತನಗೆ ಜೀವನಾಂಶ ನೀಡಿಲ್ಲ ಎಂದು ನ್ಯಾಯಾಲಯದ ಅರ್ಜಿ ಹಾಕಿದ್ದರು. ಆಗ ಕೋರ್ಟ್, ಸಿಯಾರಾಮ್ ಅವರ 13 ಅಂತಸ್ತಿನ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹರಾಜು ಹಾಕಲು ಸೂಚಿಸಿತು. 13 ಅಂತಸ್ತಿನ ಮನೆಗೆ ಬೀಗ ಜಡಿಯಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ಬೆಚ್ಚಿಬೀಳಿಸುವ ಸತ್ಯ ಹೇಳಿದ್ದಾರೆ.
ಅದೇನೆಂದರೆ, ಈ ಮನೆಯನ್ನು ಸರ್ಕಾರದ ಬಂಜರು ಭೂಮಿಯಲ್ಲಿ ಕಟ್ಟಲಾಗಿದೆ. ಇದನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಿಸಲಾಗಿಲ್ಲ. ಪಿಲ್ಲರ್ಗಳಿಲ್ಲದೇ ಕಳಪೆಯಾಗಿ ಮನೆ ನಿರ್ಮಾಣ ಮಾಡಲಾಗಿದೆ. ಇದು ಬೀಳುವ ಹಂತದಲ್ಲಿದೆ. ನಮಗೂ ಜೀವ ಭಯವಿದೆ ಎಂದು ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ದಾಖಲೆ ಪರಿಶೀಲಿಸಿದಾಗ ಮನೆಯ ಸಂಪೂರ್ಣ ಅಕ್ರಮ ಎಂಬುದು ಗೊತ್ತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿರುವುದು ಬಹಿರಂಗವಾಗಿದೆ.
ಮನೆಯನ್ನು ಸದ್ಯ ತಮ್ಮ ಸುಪರ್ದಿಗೆ ಪಡೆದಿರುವ ಅಧಿಕಾರಿಗಳು ಸಿಯಾರಾಮ್ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಮನೆ ಕೂಡ ಶಿಥಿಲಾವಸ್ಥೆಯಲ್ಲಿದ್ದು, ಮಾರಾಟವೂ ಅಸಾಧ್ಯವಾಗಿದೆ. ಇತ್ತ ವಿಚ್ಚೇದಿತ ಪತ್ನಿಗೆ ಜೀವನಾಂಶವನ್ನೂ ಕೊಡಿಸಬೇಕಾದ ಸಂದಿಗ್ಧದಲ್ಲಿ ಅಧಿಕಾರಿಗಳು ಇದ್ದಾರೆ.
ಅಪಾಯದಲ್ಲಿ ಮನೆ:ದೈತ್ಯ ಮನೆ ಬೀಳುವ ಸ್ಥಿತಿಯಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿವೆ. 6 ವರ್ಷಗಳಿಂದ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಕಟ್ಟಡವನ್ನು ವಶಪಡಿಸಿಕೊಳ್ಳಲಾಗಿದ್ದು, ಸಿಯಾರಾಮ್ ಸೋನಭದ್ರ ಜಿಲ್ಲೆಯ ಗಣೇಶಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕಟ್ಟಡದ ಸುತ್ತಮುತ್ತ ವಾಸಿಸುವ ಜನರು ಭಯಭೀತರಾಗಿದ್ದಾರೆ. ಮನೆ ಎತ್ತರದಲ್ಲಿದ್ದು, ಬಲವಾಗಿ ಗಾಳಿ ಬೀಸಿದಾಗ ಅದು ಬೀಳುವ ಸಾಧ್ಯತೆ ಇದೆ. ಕಟ್ಟಡವನ್ನು ಕೆಡವಬೇಕು. ಇಲ್ಲದಿದ್ದರೆ ಅಪಾಯ ಖಂಡಿತ ಎಂದು ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ:RPF Jawan: ಜೈಪುರ-ಮುಂಬೈ ರೈಲಿನಲ್ಲಿ ಗುಂಡು ಹಾರಿಸಿದ RPF ಕಾನ್ಸ್‌ಟೇಬಲ್; ನಾಲ್ವರು ಸಾವು!