ಚಂಡೀಗಢ (ಪಂಜಾಬ್): ಪರಾರಿಯಾಗಿರುವ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಪತ್ತೆಗೆ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಇದರ ನಡುವೆ ರಾಜ್ಯದ ಹಲವೆಡೆ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳ ಮೇಲಿನ ನಿರ್ಬಂಧವನ್ನು ಸೋಮವಾರ ಮಧ್ಯಾಹ್ನದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಪರಾರಿ: ಪಂಜಾಬ್ ಪೊಲೀಸರ ಪ್ರಕಟಣೆ
ನಿನ್ನೆ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಪೊಲೀಸರು ಬೃಹತ್ ಕಾರ್ಯಾಚರಣೆಗೆ ಇಳಿದಿದ್ದರು. ಆದರೆ, ಕಾರಿನಲ್ಲಿ ಅಮೃತಪಾಲ್ ಪರಾರಿಯಾಗಿದ್ದ. ಈತನ ಸೆರೆ ಹಿಡಿಯಲು ಪೊಲೀಸರು ಬೆನ್ನಟ್ಟಿದ್ದರೂ, ಪಲಾಯನ ಆಗಿದ್ದಾನೆ. ಹೀಗಾಗಿಯೇ, ಇಂದು ಕೂಡ ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆ ಸಂದರ್ಭದಲ್ಲಿ ಅಮೃತಪಾಲ್ ಬೆಂಗಾವಲಿನ ಕಾರುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾಳೆಯವರೆಗೂ ಇಂಟರ್ನೆಟ್ ಸೇವೆ ಸ್ಥಗಿತ: ಮತ್ತೊಂದೆಡೆ, ಅಮೃತಪಾಲ್ ಸಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆ ಭಾಗವಾಗಿ ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಪಂಜಾಬ್‌ನ ಪ್ರಾದೇಶಿಕ ನ್ಯಾಯ ವ್ಯಾಪ್ತಿಯಲ್ಲಿ ಎಲ್ಲ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಎಲ್ಲ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಬ್ಯಾಂಕಿಂಗ್ ಸೇವೆ ಮತ್ತು ಮೊಬೈಲ್ ರಿಚಾರ್ಜ್ಗೆ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಎಲ್ಲ ಡಾಂಗಲ್ ಸೇವೆಗಳು, ವಾಯ್ಸ್ ಕಾಲ್ ಹೊರತುಪಡಿಸಿ ಉಳಿದ ಎಲ್ಲ ಸೇವೆಗಳನ್ನು ಮಾರ್ಚ್ 20ರ ಮಧ್ಯಾಹ್ನ 12 ಗಂಟೆಯವರೆಗೆ ನಿರ್ಬಂಧಿಸಿ ಆದೇಶಿಸಲಾಗಿದೆ. ಮತ್ತೊಂದೆಡೆ, ಜಲಂಧರ್‌ನಲ್ಲಿ ಎಸ್‌ಎಸ್‌ಪಿ ಅರ್ಬನ್ ಮತ್ತು ಎಸ್‌ಎಸ್‌ಪಿ ಗ್ರಾಮಾಂತರ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ.