ನವದೆಹಲಿ: ಹಕ್ಕಿಜ್ವರದಿಂದ ಸಾವನ್ನಪ್ಪಿದ ಮೊದಲ ಮಾನವ ಪ್ರಕರಣ ದೇಶದಲ್ಲಿ ದೃಢಪಟ್ಟಿದೆ. ಈ ಕುರಿತು ಮಾತನಾಡಿದ ದೆಹಲಿ ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ, H5N1(ಹಕ್ಕಿ ಜ್ವರ) ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು ಬಹಳ ವಿರಳ. ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ, ಸಂಪರ್ಕ ಪತ್ತೆಹಚ್ಚುವ ಅವಶ್ಯಕತೆಯಿದೆ. ಸ್ಯಾಂಪಲ್‌ಗಳನ್ನು ಸಹ ತೆಗೆದುಕೊಳ್ಳಬೇಕು. ಅಲ್ಲದೇ ವೈರಸ್‌ನಿಂದ ಸಾವನ್ನಪ್ಪಿದ ಮಗು ವಾಸಿಸುತ್ತಿದ್ದ ಪ್ರದೇಶದಲ್ಲಿ ಯಾವುದೇ ಕೋಳಿ ಸಾವನ್ನಪ್ಪಿರುವ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.
H5N1 ವೈರಸ್ ಸೋಂಕಿಗೆ ಒಳಗಾದ ಹರಿಯಾಣದ 12 ವರ್ಷದ ಬಾಲಕ ಇತ್ತೀಚೆಗೆ ದೆಹಲಿಯ ಏಮ್ಸ್ನಲ್ಲಿ ಮೃತಪಟ್ಟಿದ್ದ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆ ಈ ಸೋಂಕನ್ನು ದೃಢಪಡಿಸಿತ್ತು.
ಪಕ್ಷಿಗಳಿಂದ ಮನುಷ್ಯರಿಗೆ ವೈರಸ್ ಹರಡುವುದು ಅಪರೂಪ ಮತ್ತು H5N1 ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ನಿರಂತರವಾಗಿ ಹರಡುವುದು ಇನ್ನೂ ದೃಢವಾಗಿಲ್ಲ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. ಆದರೆ ಹಕ್ಕಿ ಜ್ವರದ ಭೀತಿಯ ಸಂದರ್ಭದಲ್ಲಿ ಕೋಳಿಯ ಜೊತೆ ನಿಕಟವಾಗಿ ಕೆಲಸ ಮಾಡುವ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಿಯಾದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಈ ಹಿಂದೆ ಕೋಳಿಮಾಂಸದಿಂದ H5N1 ಪ್ರಕರಣಗಳು ಹರಡುತ್ತವೆ ಎಂದು ವರದಿಯಾದಾಗ, ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಅದನ್ನು ಮೊದಲೇ ನಿಭಾಯಿಸಲು ಆ ಪ್ರದೇಶಗಳಲ್ಲಿ ಕೋಳಿಗಳನ್ನು ಕೊಲ್ಲಲಾಗುತ್ತಿತ್ತು. H5N1 ಸಾಮಾನ್ಯವಾಗಿ ವಲಸೆ ಹಕ್ಕಿಗಳ ಮೂಲಕ ಕೋಳಿಗಳಿಗೆ ಹರಡುತ್ತದೆ. ಕೋಳಿ ಮಾಂಸದೊಂದಿಗೆ ನಿಕಟ ಸಂಪರ್ಕದಲ್ಲಿ ಕೆಲಸ ಮಾಡುವ ಜನರು ಸೋಂಕನ್ನು ಪಡೆಯುವ ಅಪಾಯವಿದೆ ಎಂದು ಗುಲೇರಿಯಾ ವಿವರಿಸಿದರು.
ಹಕ್ಕಿ ಜ್ವರ ಪ್ರಧಾನವಾಗಿ ಝೋನೋಸಿಸ್ ಆಗಿದೆ. ಇದುವರೆಗೆ ವ್ಯಕ್ತಿಯಿಂದ ವ್ಯಕ್ತಿಗರ ನಿರಂತರವಾಗಿ ಹರಡುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಏಮ್ಸ್ನ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನೀರಜ್ ನಿಸ್ಚಲ್ ಹೇಳಿದ್ದಾರೆ.
ಸರಿಯಾಗಿ ಬೇಯಿಸಿದ ಕೋಳಿ ಉತ್ಪನ್ನಗಳನ್ನು ತಿನ್ನುತ್ತಿದ್ದರೆ ಚಿಂತಿಸಬೇಕಾಗಿಲ್ಲ. ಸರಿಯಾಗಿ ಬೇಯಿಸಿದ ಆಹಾರದ ಮೂಲಕ ಈ ರೋಗ ಜನರಿಗೆ ಹರಡಿದ ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸಿದಾಗ ವೈರಸ್ ನಾಶವಾಗುತ್ತದೆ. ಸೋಂಕಿತ ಕೋಳಿ, ವಿಶೇಷವಾಗಿ ಅನಾರೋಗ್ಯ ಅಥವಾ ಸಾಯುತ್ತಿರುವ ಕೋಳಿಗಳೊಂದಿಗೆ ಸಂಪರ್ಕ ಹೊಂದುವುದನ್ನು ಆದಷ್ಟು ತಪ್ಪಿಸಬೇಕು ಎಂದು ಡಾ.ನೀರಜ್ ನಿಸ್ಚಲ್ ಹೇಳಿದ್ದಾರೆ.
ಝೋನೋಸಿಸ್ ಎಂಬುದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಅದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಝೋನೋಟಿಕ್ ರೋಗಕಾರಕಗಳು ಬ್ಯಾಕ್ಟೀರಿಯಾ, ವೈರಲ್ ಅಥವಾ ಪರಾವಲಂಬಿಯಾಗಿರಬಹುದು ಅಥವಾ ಅಸಾಂಪ್ರದಾಯಿಕ ಏಜೆಂಟ್‌ಗಳನ್ನು ಒಳಗೊಂಡಿರಬಹುದು ಮತ್ತು ನೇರ ಸಂಪರ್ಕದ ಮೂಲಕ ಅಥವಾ ಆಹಾರ, ನೀರು ಅಥವಾ ಪರಿಸರದ ಮೂಲಕ ಮನುಷ್ಯರಿಗೆ ಹರಡಬಹುದು.
ಇದನ್ನೂ ಓದಿ: ಹಕ್ಕಿಜ್ವರಕ್ಕೆ ಈ ವರ್ಷದ ಮೊದಲ ಬಲಿ: 11ರ ಬಾಲಕ ಏಮ್ಸ್ನಲ್ಲಿ ಸಾವು