ಹೈದರಾಬಾದ್:ಲಂಡನ್‌ನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿನ ತ್ರಿವರ್ಣ ಧ್ವಜ ಕೆಳಗಿಳಿಸಿದ ಖಲಿಸ್ತಾನಿ ಪರ ಪ್ರತಿಭಟನಾಕಾರರಿಗೆ ಭಾರತ ದಿಟ್ಟ ಪ್ರತಿಕ್ರಿಯೆ ನೀಡಿದೆ. ತ್ರಿವರ್ಣ ಧ್ವಜ ಇಳಿಸಿದ ಬೆನ್ನಲ್ಲೇ ಹೈಕಮಿಷನ್ ಕಟ್ಟಡದ ಮೇಲೆ ಬೃಹತ್ ತ್ರಿವರ್ಣ ಧ್ವಜ ಅನಾವರಣಗೊಂಡಿದೆ. ಲಂಡನ್‌ನ ಆಲ್ಡ್‌ವಿಚ್‌ನಲ್ಲಿರುವ ಇಂಡಿಯಾ ಹೌಸ್ ಮೇಲೆ ಭಾರತದ ಬೃಹತ್ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಭಾರತದ ಹೈಕಮಿಷನ್ ಅಧಿಕಾರಿಗಳ ನಡೆಯನ್ನು ಶ್ಲಾಘಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಅವರು ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, "ಝಂಡಾ ಊಂಚಾ ರಹೇ ಹಮಾರಾ" ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ, ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ನಲ್ಲಿನ ತ್ರಿವರ್ಣ ಧ್ವಜಕ್ಕೆ ಅವಮಾನಿಸಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಬ್ರಿಟನ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರ ಸೇವೆ ಹಾಗೂ ರಾಷ್ಟ್ರ ಸಂರಕ್ಷಣೆಯಲ್ಲಿ ಪಂಜಾಬ್ ಮತ್ತು ಪಂಜಾಬಿಗಳು ಅದ್ಭುತ ದಾಖಲೆ ಹೊಂದಿದ್ದಾರೆ. ಬ್ರಿಟನ್‌ನಲ್ಲಿ ಕುಳಿತಿರುವ ಕೆಲವರು ಪಂಜಾಬ್ ಅನ್ನು ಪ್ರತಿನಿಧಿಸಲ್ಲ ಎಂದು ಕಿಡಿಕಾಡಿದ್ದಾರೆ.
ಖಲಿಸ್ತಾನಿ ಪರ ಪ್ರತಿಭಟನಾಕಾರರು ಲಂಡನ್‌ನಲ್ಲಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸುತ್ತಿರುವ ದೃಶ್ಯಗಳು ಭಾರತವನ್ನು ಕೆರಳಿಸಿದ್ದವು. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಖಲಿಸ್ತಾನಿಗಳ ನಡೆಯನ್ನು ಖಂಡಿಸಿದ್ದರು. ಈ ವೇಳೆ ಭಾರತ ಧ್ವಜವನ್ನು ತೆಗೆದುಕೊಂಡು, ಖಲಿಸ್ತಾನಿ ಧ್ವಜವನ್ನು ಕಿತ್ತೆಸೆಯುತ್ತಿರುವ ಭಾರತೀಯ ಹೈಕಮಿಷನ್ ಅಧಿಕಾರಿಯ ದಿಟ್ಟತನಕ್ಕೆ ಭಾರತೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳು ಲಂಡನ್‌ನಲ್ಲಿನರುವ ಭಾರತೀಯ ಹೈಕಮಿಷನ್ ಕಚೇರಿ ಮೇಲಿನ ತ್ರಿವರ್ಣ ಧ್ವಜ ಕೆಳಗಿಳಿಸಿ ಬಳಿಕ ಖಲಿಸ್ತಾನ್ ಧ್ವಜ ಹಾರಿಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ನಂತರ, ವಿದೇಶಾಂಗ ಸಚಿವಾಲಯ ಭಾನುವಾರ ಸಂಜೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರನ್ನು ಕರೆಸಿಕೊಂಡು ಹೈಕಮಿಷನ್ ಆವರಣದಲ್ಲಿ ಭದ್ರತಾ ಲೋಪದ ಬಗ್ಗೆ ವಿವರಣೆ ಕೇಳಿತ್ತು. ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಗೆ ಯುಕೆ ಸರ್ಕಾರದ ಉದಾಸೀನತೆಯ ಬಗ್ಗೆ ಸಚಿವಾಲಯ ತನ್ನ ಅತೃಪ್ತಿ ವ್ಯಕ್ತಪಡಿಸಿತು. ಇದನ್ನು ಸ್ವೀಕಾರಾರ್ಹವಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿತ್ತು.