ದೌಸಾ (ರಾಜಸ್ಥಾನ):ಪ್ರಧಾನಿ ನರೇಂದ್ರ ಮೋದಿ ಅವರು ನಾಡಿದ್ದು (ಫೆ.12) ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮೊದಲು 1 ಸಾವಿರ ಕೆಜಿಗೂ ಅಧಿಕ ಸ್ಫೋಟಕಗಳು, ಡಿಟೋನೇಟರ್‌ಗಳು, ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸ್ಫೋಟಕಗಳನ್ನು ಅಕ್ರಮ ಗಣಿಗಾರಿಕೆಯ ಬಳಕೆಗಾಗಿ ಸಾಗಿಸಲಾಗುತ್ತಿತ್ತು ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ದೆಹಲಿ- ಮುಂಬೈ ಎಕ್ಸ್ಪ್ರೆಸ್ ವೇ ಭಾಗವಾದ ದೌಸಾ ಮತ್ತು ಸೋಹ್ನಾ ಮಾರ್ಗದ ಉದ್ಘಾಟನೆಗೆ ಫೆ.12 ರಂದು ನರೇಂದ್ರ ಮೋದಿ ಅವರು ದೌಸಾ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಭದ್ರತಾ ಸಿದ್ಧತೆಗಳನ್ನು ನಡೆಸುತ್ತಿರುವ ಪೊಲೀಸರಿಗೆ ವಾಹನ ತಪಾಸಣಾ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಸ್ಫೋಟಕಗಳು, ಡಿಟೋನೇಟರ್‌ಗಳು ಮತ್ತು ಇತರ ವಸ್ತುಗಳನ್ನು ವಾಹನದಲ್ಲಿ ಸಾಗಿಸುತ್ತಿರುವುದನ್ನು ಕಂಡುಹಿಡಿದಿದ್ದಾರೆ.
ಸ್ಫೋಟಕಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಗಮನಿಸಿದ ಪೊಲೀಸರು ವಾಹನ ತಡೆದು ತಪಾಸಿಸಿದಾಗ ಸ್ಫೋಟಕ ವಸ್ತುಗಳು ತುಂಬಿದ್ದು ಗೊತ್ತಾಗಿದೆ. ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆದರೆ, ಆತ ಸುಳ್ಳು ಮಾಹಿತಿ ನೀಡಿದ್ದರಿಂದ ಬಂಧಿಸಿದ್ದಾರೆ. ಅಲ್ಲದೇ, ಡಿಟೋನೇಟರ್‌ಗಳನ್ನು ಸಾಗಿಸಲು ಯಾವುದೇ ಪರವಾನಗಿ ಕೂಡ ಹೊಂದಿರಲಿಲ್ಲ.