ರಾಂಚಿ(ಜಾರ್ಖಂಡ್):ಅಪಾರ ಪ್ರಮಾಣದ ಹಣದೊಂದಿಗೆ ಜಾರ್ಖಂಡ್ನ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಸಿಕ್ಕಬಿದ್ದಿದ್ದಾರೆ. ಅವರ ಕಾರಿನ ಡಿಕ್ಕಿಯಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾರ್ಖಂಡ್ನ ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್, ಕೆಚಾಪ್ ಹಾಗೂ ನಮನ್ ಬಿಕ್ಸಾಲ್ ಪೊಲೀಸರ ಬಲೆಗೆ ಬಿದ್ದವರು.
ಪಶ್ಚಿಮ ಬಂಗಾಳದಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇವರನ್ನು ಹೆಡೆಮುರಿ ಕಟ್ಟಿದ್ದಾರೆ. ಶಾಸಕರ ಕಾರಿನಲ್ಲಿ ಸಿಕ್ಕಿರುವ ಹಣ ಎಷ್ಟು ಎಂಬುದರ ಬಗ್ಗೆ ಇಲ್ಲಿಯವರೆಗೆ ಲೆಕ್ಕ ಸಿಕ್ಕಿಲ್ಲ. ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಮಷಿನ್ಗಳೊಂದಿಗೆ ತೆರಳಿದ್ದಾರೆ.
ಜಾರ್ಖಂಡ್ನಿಂದ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಡೆಗೆ ತೆರಳುತ್ತಿದ್ದಾಗ ಪಾಂಚಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಹಟಿ ಮೋರ್ ಬಳಿ ಅವರ ಕಾರು ತಡೆದು ತಪಾಸಣೆ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಅಪಾರ ಪ್ರಮಾಣದ ಹಣ ಸಿಕ್ಕಿರುವ ಕಾರಣ ಮೂವರು ಕಾಂಗ್ರೆಸ್ ಶಾಸಕರನ್ನ ಪೊಲೀಸರು ಬಂಧನ ಮಾಡಿ, ವಿಚಾರಣೆಗೊಳಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭಂಗಾಲಿಯಾ ದೌಡಾಯಿಸಿದ್ದು, ತಪಾಸಣೆ ನಡೆಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ ರಹಸ್ಯ ಮಾಹಿತಿಯ ಆಧಾರದ ಮೇಲೆ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಟಿಎಂಸಿ ಟ್ವೀಟ್ ಮಾಡಿದ್ದು, ಇಡಿ, ಪೊಲೀಸ್ ಅಧಿಕಾರಿಗಳು ನಿರ್ದಿಷ್ಟ ಮುಖಂಡರ ಮೇಲೆ ಮಾತ್ರ ದಾಳಿ ಮಾಡುತ್ತಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿರಿ:ಟಿಎಂಸಿ ಸಚಿವರ ಆಪ್ತೆ ಮನೆಯಲ್ಲಿ ₹20 ಕೋಟಿ ನಗದು.. ಮುಂದುವರಿದ ಶೋಧಕಾರ್ಯ