300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಬಸ್ ಮಂಡಿ (ಹಿಮಾಚಲ ಪ್ರದೇಶ): ಜಿಲ್ಲೆಯ ಕರ್ಸೋಗ್‌ನಲ್ಲಿ ಬಹುದೊಡ್ಡ ಅನಾಹುತ ಪವಾಡದಂತೆ ತಪ್ಪಿದೆ. ಮಂಡಿ ಜಿಲ್ಲೆಯ ಕರ್ಸೋಗ್ ಎಂಬಲ್ಲಿ ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಿವರ: ಕರ್ಸೋಗ್‌ನಲ್ಲಿಂದು ಉರುಳಿಬಿದ್ದ ಹೆಚ್‌ಆರ್‌ಟಿಸಿ ಬಸ್‌ನಲ್ಲಿ 47 ಮಂದಿ ಪ್ರಯಾಣಿಕರಿದ್ದರು. ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಸ್ ಕಂದಕಕ್ಕೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸ್ ಆಡಳಿತ ಮತ್ತು ಎಚ್‌ಆರ್‌ಟಿಸಿ ಅಧಿಕಾರಿಗಳು ಸ್ಥಳದಲ್ಲಿದ್ದು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮರ, ಗಿಡಗಳಿಂದ ತಪ್ಪಿದ ಅನಾಹುತ:ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಬಸ್ ಮಂಡಿಯಿಂದ ಕರ್ಸೋಗ್‌ಗೆ ಬರುತ್ತಿತ್ತು. ಕರ್ಸೋಗ್‌ನ ಮಾಮೇಲ್ ಮಂಡಿ ರಸ್ತೆಯ ದೇರಿಧಾರ್ ಬಳಿ ಅಪಘಾತ ಜರುಗಿದೆ. ಈ ಸ್ಥಳದಲ್ಲಿ ಸಾಕಷ್ಟು ಮರಗಳಿದ್ದು, ಉರುಳುತ್ತಿದ್ದ ಬಸ್‌ಗೆ ಪೈನ್ ಮರಗಳು ತಡೆಯೊಡ್ಡಿವೆ. ಇಲ್ಲವಾದಲ್ಲಿ ಸಾಕಷ್ಟು ಸಾವುನೋವು ಸಂಭವಿಸುತ್ತಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.
ಇಂದು ಬೆಳಗ್ಗೆ ಸಂಭವಿಸಿದ ಘಟನೆಯಲ್ಲಿ ಕನಿಷ್ಠ 8 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನೂ 25 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ಸೋಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಪಿಡಬ್ಲ್ಯುಡಿ ಮತ್ತು ಎಚ್‌ಆರ್‌ಟಿಸಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಪ್ಯಾರಪೆಟ್‌ಗಳು ಇರಲಿಲ್ಲ ಎಂದು ಜನರು ಹೇಳುತ್ತಾರೆ. ಪ್ಯಾರಪೆಟ್ ಅಥವಾ ಕ್ರಾಶ್ ಬ್ಯಾರಿಯರ್ ಇದ್ದಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ. ಅಪಘಾತದ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಬಸ್ ರಸ್ತೆಯಿಂದ ಕೆಳಗಿಳಿದು ಅಂದಾಜು 300 ಅಡಿ ಆಳ ಕಂದಕಕ್ಕೆ ಉರುಳಿದೆ. ಪೈನ್ ಮರಗಳಿಗೆ ಡಿಕ್ಕಿ ಹೊಡೆದು ನಂತರ ಬಸ್ ನಿಂತಿದ್ದು, 47 ಪ್ರಯಾಣಿಕರು ಪವಾಡದಂತೆ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ.
ಇದನ್ನೂ ಓದಿ:ಹೃದಯಾಘಾತದಿಂದ ಚಾಲಕ ಸಾವು: ಪೆಟ್ರೋಲ್ ಬಂಕ್ಗೆ ನುಗ್ಗಿದ ಬಸ್, ಸಮಯ ಪ್ರಜ್ಞೆ ಮೆರೆದ ನಿರ್ವಾಹಕ
ಕಂದಕಕ್ಕೆ ಬಿದ್ದ ಬಸ್, 10 ಜನರು ಸಾವು:ಮೇ 30ರ ಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಬಸ್ಸೊಂದು ಆಳವಾದ ಕಂದಕಕ್ಕೆ ಬಿದ್ದು 10 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಈ ಬಸ್ ಅಮೃತಸರದಿಂದ ಕತ್ರಾಕ್ಕೆ ಹೋಗುತ್ತಿತ್ತು. ಜಜ್ಜರ್ ಕೋಟ್ಲಿ ಎಂಬಲ್ಲಿ ಮೇಲ್ಸೇತುವೆಯ ಬಳಿ ಆಯತಪ್ಪಿ ಉರುಳಿ ಬಿದ್ದಿದೆ. ಪ್ರವಾಸಿಗರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ವಿಷಯ ತಿಳಿದ ಪೊಲೀಸ್ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದವು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಮೈಸೂರಿನಲ್ಲಿ ಸಂಭವಿಸಿದ ಭೀಕರ ಅಪಘಾತ:ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಿನ ಕುರುಬೂರು ಗ್ರಾಮದ ಬಳಿಕ ಮೇ 29 ರಂದು ನಡೆದಿತ್ತು. ಮೃತರೆಲ್ಲರೂ ಬಳ್ಳಾರಿ ಜಿಲ್ಲೆಯವರಾಗಿದ್ದರು. ಮೂರು ಕುಟುಂಬಗಳ 12 ಸದಸ್ಯರು ಪ್ರವಾಸಕ್ಕೆಂದು ಮೈಸೂರಿಗೆ ಆಗಮಿಸಿದ್ದಾಗ ದುರಂತ ಸಂಭವಿಸಿತ್ತು.