ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಂಚಾರ ವಿಚಾರವಾಗಿ ಸಾರಿಗೆ ಬಸ್ ಚಾಲಕ ಮತ್ತು ಕಾರಿನ ಚಾಲಕನ ನಡುವೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಕಾರು ಮಾಲೀಕನ ಕಾಲಿಗೆ ಬಿದ್ದು ಚಾಲಕ ಮೂಗು ಉಜ್ಜುವ ಮೂಲಕ ಕ್ಷಮೆಯಾಚಿಸುವಂತೆ ಮಾಡಲಾಗಿದೆ. ಇದರ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೇಗದ ಚಾಲನೆ ಹಾಗೂ ಓವರ್ ಟೇಕ್ ಮಾಡುವ ವಿಚಾರದಲ್ಲಿ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಹೆಚ್‌ಆರ್‌ಟಿಸಿ)ಯ ಬಸ್ ಚಾಲಕ ಮತ್ತು ಕಾರಿನ ಚಾಲಕನ ನಡುವೆ ವಾಗ್ವಾದ ಜರುಗಿದೆ. ಈ ಸಂಬಂಧ ಕಾರಿನ ಮಾಲೀಕ ಬಸ್ ಚಾಲನ ವಿರುದ್ಧ ದೂರು ನೀಡಿದ್ದಾರೆ. ನಂತರ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿಸಲಾಗಿದೆ. ಈ ರಾಜಿ ಭಾಗವಾಗಿ ಕಾರು ಮಾಲೀಕನ ಕಾಲಿಗೆ ಬಸ್ ಚಾಲಕನಿಂದ ಮೂಗು ಉಜ್ಜಿಸಿ ಕ್ಷಮೆ ಕೋರುವಂತೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.
ಘಟನೆಯ ವಿವರ: ಹೆಚ್‌ಆರ್‌ಟಿಸಿ ಬಸ್ ಥಾರೋಚ್‌ನಿಂದ ರೋಹ್ರುಗೆ ತೆರಳುತ್ತಿತ್ತು. ಬಸ್ ಜುಬ್ಬಲ್‌ನ ಹಟ್‌ಕೋಟಿ ತಲುಪಿದಾಗ ಎದುರಗಡೆ ಕಾರೊಂದು ಬಂದಿದೆ. ಈ ವೇಳೆ ಬಸ್ ಮತ್ತು ಕಾರು ರಸ್ತೆ ಮಧ್ಯೆ ಮುಖಾಮುಖಿಯಾಗಿ ನಿಂತಿವೆ. ಇದರಿಂದ ಬಸ್ ಚಾಲಕನಿಗಾಗಲಿ ಅಥವಾ ಕಾರು ಚಾಲಕನಿಗಾಗಲಿ ಮುಂದೆ ಚಲಿಸಲು ಸಾಧ್ಯವಾಗಿಲ್ಲ. ಆಗ ವೇಗದ ಚಾಲನೆ ಹಾಗೂ ಓವರ್ ಟೇಕ್ನಿಂದಾಗಿ ಎರಡು ವಾಹನಗಳು ರಸ್ತೆ ನಡುವೆ ಸಿಲುಕಿದಂತಾಗಿದೆ ಎಂದು ಇಬ್ಬರ ಚಾಲಕ ನಡುವೆ ಗಲಾಟೆ ಶುರುವಾಗಿದೆ. ನಂತರ ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಇದರ ನಡುವೆ ಬಸ್ ಚಾಲಕ ಕಾರಿನ ಮೇಲೇರಿ ಕಾರಿನಲ್ಲಿದ್ದ ಚಾಲಕನ ಮುಖಕ್ಕೆ ಒದೆಯಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗುತ್ತಿದೆ.