ಹೈದರಾಬಾದ್: ಜಗತ್ತಿನಲ್ಲಿ ಹೆಚ್ಚಿನ ಸಾವುಗಳ ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಇಂದು ವಿಶ್ವ ಕ್ಯಾನ್ಸರ್ ಜಾಗೃತಿ ದಿನವಾಗಿದ್ದು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಸ್ತನ ಕ್ಯಾನ್ಸರ್, ಗರ್ಭ ಕ್ಯಾನ್ಸರ್, ಶ್ವಾಸಕೋಶ, ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿವೆ.
ಕ್ಯಾನ್ಸರ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಉಪಕ್ರಮವೇ ವಿಶ್ವ ಕ್ಯಾನ್ಸರ್ ದಿನವಾಗಿದ್ದು, ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮಹತ್ವವನ್ನು ಇದು ಪುನರ್ ದೃಢೀಕರಿಸುತ್ತದೆ. ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧವನ್ನು ಇದುವರೆಗೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಈ ರೋಗವನ್ನು ನಿಯಂತ್ರಿಸುವಲ್ಲಿ ನಮ್ಮ ಪಾತ್ರವೇನು ಎಂಬ ಪ್ರಮುಖ ಸಂದೇಶವನ್ನು ರವಾನಿಸುವುದು ಈ ದಿನದ ಮಹತ್ವವಾಗಿದೆ.
ಕ್ಯಾನ್ಸರ್ ಬಗ್ಗೆ ತಪ್ಪು ಕಲ್ಪನೆಗಳು, ಕಟ್ಟುಕತೆಗಳನ್ನು ಹೋಗಲಾಡಿಸಿ ಜನರಿಗೆ ಇದರ ಬಗ್ಗೆ ಶಿಕ್ಷಣ ನೀಡುವುದರ ಜತೆಗೆ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು ಅಂತಾರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಮುಖ ಉದ್ದೇಶವಾಗಿದೆ.