ಲಖನೌ:ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮತ ಪ್ರಚಾರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಸಂಜೆ ವೇಳೆಗೆ ಸ್ಪಷ್ಟವಾಗಲಿದೆ.
ಈಗಾಗಲೇ ರಾಕೇಶ್ ಟಿಕಾಯತ್ ಅವರ ಹೋರಾಟ ಹಾಗೂ ಸಾರ್ವಜನಿಕ ಸಭೆಗಳ ಪರಿಣಾಮ ರಾಜ್ಯದ ಸುಮಾರು 60 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಅದರಲ್ಲೂ ಪಶ್ಚಿಮ ಉತ್ತರ ಪ್ರದೇಶದ ಸ್ಥಾನಗಳಲ್ಲಿ ಹಸ್ತಕ್ಷೇಪ ಸಾಧ್ಯತೆಯಿದ್ದು, ಬಿಜೆಪಿಗೆ ಸಂಕಷ್ಟ ತಂದಿದೆ ಎನ್ನಲಾಗ್ತಿದೆ. ಇದಲ್ಲದೇ, ಮೀರತ್, ಬರೇಲಿ, ಪ್ರಯಾಗರಾಜ್, ಲಖನೌ, ಲಖೀಂಪುರ ಖೇರಿ, ಕಾನ್ಪುರ, ಅಲಿಗಢ, ಬಾಗ್‌ಪತ್ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಪ್ರಮುಖ ಜಿಲ್ಲೆಗಳಲ್ಲಿ ಟಿಕಾಯತ್ ಮತ್ತು ಅವರ ಸಂಘಟನೆ 20ಕ್ಕೂ ಹೆಚ್ಚು ಸಭೆ ಹಾಗೂ ಮಾಧ್ಯಮಗೋಷ್ಟಿಗಳನ್ನು ನಡೆಸಿತ್ತು. ಈ ಎಲ್ಲ ಕಡೆಗಳಲ್ಲಿ ರೈತರ ಸಮಸ್ಯೆಗಳು ಮತ್ತು ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಅವರು ಧ್ವನಿ ಎತ್ತಿದ್ದರು. ಇದೆಲ್ಲ ಚುನಾವಣಾ ಫಲಿತಾಂಶದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಇಂದೇ ತಿಳಿಯಲಿದೆ.
ಮೊದಲ ಹಂತದ ಸ್ಥಾನಗಳ ಮೇಲಿನ ಪರಿಣಾಮ:ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಸುಮಾರು 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ಪೈಕಿ ಮೀರತ್, ಶಾಮ್ಲಿ, ಮುಜಾಫರ್‌ನಗರ, ಬಾಗ್‌ಪತ್, ಹಾಪುರ್, ಗಾಜಿಯಾಬಾದ್, ಬುಲಂದ್‌ಶಹರ್‌ನ ಸುಮಾರು 30 ಕ್ಷೇತ್ರಗಳ ಫಲಿತಾಂಶದ ಮೇಲೆ ರಾಕೇಶ್ ಟಿಕಾಯತ್ ನೇರ ಪ್ರಭಾವ ಬೀರುವ ಸಾಧ್ಯೆತೆಯಿದೆ ಎಂದು ಹೇಳಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಾಸಿಸುತ್ತಿದ್ದು, ರಾಕೇಶ್ ಟಿಕಾಯತ್ ಅವರ ಚಳವಳಿ ರೈತರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಬಿಜೆಪಿ ವಿರುದ್ಧ ನಡೆಸಿದ ಮತಪ್ರಚಾರದ ವೇಳೆ ಇಲ್ಲಿನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳಕ್ಕೂ ಪರೋಕ್ಷವಾಗಿ ಟಿಕಾಯತ್ ಬೆಂಬಲ ಸಿಕ್ಕಿದೆ. ಜೊತೆಗೆ ರೈತರ ಮೇಲೆ ರಾಷ್ಟ್ರೀಯ ಲೋಕದಳದ ಪ್ರಭಾವವಿದೆ.
ರೈತರ ಮೇಲಿನ ಬಲವಾದ ಹಿಡಿತ:ಪಶ್ಚಿಮ ಉತ್ತರ ಪ್ರದೇಶದ ಸಹರಾನ್‌ಪುರ, ಬಿಜ್ನೋರ್, ಅಮ್ರೋಹಾ, ಸಂಭಾಲ್, ಮೊರಾದಾಬಾದ್, ಶಹಜಹಾನ್‌ಪುರದ ಸುಮಾರು 20 ವಿಧಾನಸಭಾ ಕ್ಷೇತ್ರಗಳ ಮೇಲೂ ರಾಕೇಶ್ ಟಿಕಾಯತ್ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್ ಬಲವಾದ ಹಿಡಿತ ಸಾಧಿಸಿದೆ. ಚುನಾವಣೆಗೂ ಮುನ್ನ ನಡೆಸಿದ ಪ್ರಚಾರದ ವೇಳೆ ರಾಕೇಶ್ ಟಿಕಾಯತ್ ಬಿಜೆಪಿ ವಿರುದ್ಧ ರೈತರನ್ನು ಹುರಿದುಂಬಿಸಿದ್ದರು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಕರೆ ನೀಡಿದ್ದರು.
ಲಖೀಂಪುರ ಘಟನೆ ಮತ್ತು ಲಖನೌ ಸಭೆಗಳು:ರಾಕೇಶ್ ಟಿಕಾಯತ್ ಮುಖ್ಯವಾಗಿ ಲಖೀಂಪುರ ಪ್ರಕರಣ ಮತ್ತು ಸರ್ಕಾರದ ವಿರುದ್ಧ ಹೋರಾಡಿದ್ದರು. ಆ ಘಟನೆ ನಡೆದ ಬಳಿಕವೂ ಟಿಕಾಯತ್ ಸಂಘಟನೆಯೊಂದಿಗೆ ಸೇರಿ ಅಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದರು. ಲಖೀಂಪುರ ಹೊರತುಪಡಿಸಿ, ರಾಜಧಾನಿ ಲಖನೌದಲ್ಲೂ ಟಿಕಾಯತ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಪ್ರಚಾರ ನಡೆಸಿ, ಜನರನ್ನು ಹುರಿದುಂಬಿಸಿದ್ದಾರೆ.
ಲಖನೌ, ಪ್ರಯಾಗರಾಜ್ ಮತ್ತು ಕಾನ್ಪುರಕ್ಕೂ ಭೇಟಿ:ಚುನಾವಣೆಗೂ ಮುನ್ನ ರಾಜಧಾನಿ ಲಖನೌದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ರಾಕೇಶ್ ಟಿಕಾಯತ್, ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಮಾತನಾಡಿದ್ದರು. ಅದೇ ರೀತಿ ಪ್ರಯಾಗ್ರಾಜ್ ಮತ್ತು ಕಾನ್ಪುರಕ್ಕೂ ಭೇಟಿ ನೀಡಿದ್ದರು. ಟಿಕಾಯತ್ ಮೀರತ್ ತಲುಪಿದ ಮೊದಲ ವ್ಯಕ್ತಿ. ಏಕೆಂದರೆ ಮೊದಲ ಹಂತದಲ್ಲಿ ಮೀರತ್ ಸೇರಿದಂತೆ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದಕ್ಕೂ ಮೊದಲು ಹಾಗೂ ಮೊದಲ ಹಂತದ ಚುನಾವಣೆ ನಂತರವೂ ಯುನೈಟೆಡ್ ಕಿಸಾನ್ ಮೋರ್ಚಾ ಇಲ್ಲಿ ಮತ್ತು ಇತರ ಹತ್ತಿರದ ಜಿಲ್ಲೆಗಳಲ್ಲಿ ಹಂತಗಳಲ್ಲಿ ಮಾಧ್ಯಮಗೋಷ್ಟಿ ನಡೆಸಿತ್ತು.
ಚುನಾವಣೆಗೂ ಮುನ್ನ ಬರೇಲಿ ಮತ್ತು ಅಲಿಗಢದಲ್ಲಿ ಮಾಧ್ಯಮಗೋಷ್ಟಿ:ಚುನಾವಣೆಗೂ ಮುನ್ನ ಅಲಿಗಢ, ಬರೇಲಿ, ಪಿಲಿಭಿತ್, ಹಾಗೂ ಲಖೀಂಪುರ ಖೇರಿಗೆ ಭೇಟಿ ನೀಡಿದ್ದ ಟಿಕಾಯತ್ ಯುನೈಟೆಡ್ ಕಿಸಾನ್ ಮೋರ್ಚಾದ ಜಂಟಿ ಮಾಧ್ಯಮಗೋಷ್ಟಿ ನಡೆಸಿ, ಸರ್ಕಾರದ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿದ್ದರು. ಲಿಖೀಂಪುರ ಖೇರಿಯಲ್ಲಿ ಯೋಗೇಂದ್ರ ಯಾದವ್ ಮತ್ತು ರಾಕೇಶ್ ಟಿಕಾಯತ್ ಸರ್ಕಾರದ ವಿರುದ್ಧ ಮಾತನಾಡಿದ್ದರು.