ಗ್ವಾಲಿಯರ್:ಗ್ವಾಲಿಯರ್ ರಾಜಮಾತೆಯ ಪುತ್ರಿ ಮತ್ತು ಮಧ್ಯಪ್ರದೇಶದ ಕ್ರೀಡಾ ಸಚಿವೆಯಾಗಿರುವ ಯಶೋಧರ ರಾಜೇ ಸಿಂಧಿಯಾ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದ್ದಕ್ಕಿದ್ದಂತೆ ಅವರು ರಾಜಕೀಯ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದು ಮಧ್ಯಪ್ರದೇಶ ಬಿಜೆಪಿಯಲ್ಲಿ ಸಂಚಲನ ಉಂಟುಮಾಡಿದೆ. ಈ ವಿಚಾರದಲ್ಲಿ ಹೈಕಮಾಂಡ್ ಮೌನವಹಿಸಿದ್ದು ಚರ್ಚೆ ಹುಟ್ಟುಹಾಕಿದೆ.
1947ರಲ್ಲಿ ದೇಶ ಸ್ವತಂತ್ರವಾದ ನಂತರ, ಗ್ವಾಲಿಯರ್ ರಾಜ್ಯದ ರಾಣಿ ರಾಜಮಾತೆ ವಿಜಯರಾಜೇ ಸಿಂಧಿಯಾ ಕಾಂಗ್ರೆಸ್ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದರು. ನಂತರ, ಗ್ವಾಲಿಯರ್ ಚಂಬಲ್ ವಿಭಾಗದದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಅವರ ಒಳಗೊಳ್ಳುವಿಕೆ ಹೆಚ್ಚಾಯಿತು. 1967ರಲ್ಲಿ, ವಿಜಯರಾಜೇ ಸಿಂಧಿಯಾ ಮತ್ತು ಅಂದಿನ ಮುಖ್ಯಮಂತ್ರಿ ದ್ವಾರಕಾ ಪ್ರಸಾದ್ ಮಿಶ್ರಾ ಅವರೊಂದಿಗೆ ಸಂಘರ್ಷ ಉಂಟಾಯಿತು. ರಾಜಮಾತೆ ತನ್ನ ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ತೊರೆದರು. ಮಿಶ್ರಾ ಸರ್ಕಾರ ಅಲ್ಪಮತಕ್ಕೆ ಸಿಲುಕಿ ಪತನವಾಯಿತು.
ವಿಜಯರಾಜೆ ಸಿಂಧಿಯಾ ಜನಸಂಘದೊಂದಿಗೆ ಹೊಸ ಸರ್ಕಾರ ರಚಿಸಿದರು. ಇದು ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಯಿತು. ಗೋವಿಂದ್ ನಾರಾಯಣ್ ಸಿಂಗ್ ಹೊಸ ಮುಖ್ಯಮಂತ್ರಿಯಾದರು. ಈ ಸರ್ಕಾರ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಮುಖ್ಯ ಚುನಾವಣೆಯಲ್ಲಿ ಜನಸಂಘ ಹೀನಾಯವಾಗಿ ಸೋತಿತು. ನಂತರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಿತು. ಆದರೆ, ವಿಜಯರಾಜೇ ಸಿಂಧಿಯಾ ಕಾಂಗ್ರೆಸ್‌ಗೆ ಮರಳದೇ ಜನಸಂಘದಲ್ಲೇ ಉಳಿದರು.
ವಿಜಯರಾಜೇ ಸಿಂಧಿಯಾ ಜನವರಿ 25, 2000 ರಂದು ನಿಧನರಾದರು. ಈ ಹೊತ್ತಿಗೆ ಮಗಳು ಯಶೋಧರ ರಾಜೇ ಸಿಂಧಿಯಾ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಜನಸಂಘದಲ್ಲಿ ರಾಜಕೀಯ ನಾಯಕತ್ವ ಉಳಿಸಿಕೊಂಡರು. ಶಿವಪುರಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಶಿವಪುರಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಅವರು ಬಿಜೆಪಿ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷವು ಒಮ್ಮೆ ಗ್ವಾಲಿಯರ್ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೂ ಪ್ರವೇಶಿಸಿದ್ದರು.
ಈ ಮೂಲಕ ಜಯ ವಿಲಾಸ ಅರಮನೆಯಲ್ಲಿ ಎರಡೂ ಪಕ್ಷಗಳ ಪಾಲು ಉಳಿಯಿತು. ಆದರೆ, ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಪರಿಸ್ಥಿತಿ ವಿಚಲಿತವಾಗ ತೊಡಗಿತು. ಬಿಜೆಪಿಯಲ್ಲಿ ಯಶೋಧರ ಬದಲಿಗೆ ಸಿಂಧಿಯಾ ಹೆಚ್ಚು ಗಮನ ಸೆಳೆಯಲು ಪ್ರಾರಂಭಿಸಿದರು. ಅಂದಿನಿಂದ ಯಶೋಧರ ಪ್ರತ್ಯೇಕತೆ ಅನುಭವಿಸಿದರು. ಕಳೆದ ಎರಡು ವರ್ಷಗಳಿಂದ ಹಲವು ಬಾರಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇದೀಗ ದಿಢೀರ್ ಎಂಬಂತೆ, ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸುವ ಮೂಲಕ ಸಂಚಲನ ಮೂಡಿಸಿದ್ದಲ್ಲದೆ ಬಿಜೆಪಿ ನಾಯಕರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮಾಧವರಾವ್ ಸಿಂಧಿಯಾ ನಾಯಕತ್ವದಲ್ಲಿಯೂ ಕೆಲಸ ಮಾಡಲು ಸಾಧ್ಯವಾಗದ ಕಾರಣ ಬಿಜೆಪಿಯೊಂದಿಗೆ ರಾಜಮಾತೆಯ ರಾಜಕೀಯ ಪರಂಪರೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ಬಿಜೆಪಿಯ ಸದ್ಯದ ಆತಂಕ.
ಇದನ್ನೂ ಓದಿ:ಎನ್ಡಿಎ ಮೈತ್ರಿಕೂಟದಿಂದ ಜನಸೇನಾ ಹೊರಬರುವ ಬಗ್ಗೆ ವೈಎಸ್ಆರ್ ಕಾಂಗ್ರೆಸ್ನಿಂದ ಅಪಪ್ರಚಾರ: ಪವನ್ ಕಲ್ಯಾಣ್