ಮ್ಯುಕೊರ್ಮೈಕೋಸಿಸ್ ಫಂಗಸ್ (ಬ್ಲ್ಯಾಕ್ ಫಂಗಸ್) ಸಾಮಾನ್ಯವಾಗಿ ಎಲ್ಲೆಡೆಯೂ ಕಂಡು ಬರುವ ಫಂಗಸ್ ಆಗಿದ್ದು, ಇದು ವಾತಾವರಣದಲ್ಲಿ ಹರಡಿರುತ್ತದೆ. ಮಣ್ಣು, ಕೊಳೆತ ತರಕಾರಿ ಅಥವಾ ಹಣ್ಣು, ಯಾವುದಾದರೂ ಸಾವಯವ ವಸ್ತು ಇತ್ಯಾದಿ ಹೀಗೆ ಯಾವುದರಲ್ಲಾದರೂ ಇದು ಇರಬಹುದು. ಈ ಫಂಗಸ್ ಕಣಗಳು ಉಸಿರಿನ ಮೂಲಕ ಮೂಗು ಪ್ರವೇಶಿಸಿ ಮೊದಲಿಗೆ ಸೈನಸ್ ಭಾಗಕ್ಕೆ ಹೋಗುತ್ತವೆ. ನಂತರವಷ್ಟೇ ಇವು ಕಣ್ಣಿಗೆ ದಾಳಿ ಮಾಡುತ್ತವೆ.
ಹೀಗಾಗಿ ಈ ಫಂಗಸ್ ಸೋಂಕಿತರಿಗೆ ಆರಂಭದಲ್ಲಿ ಮೂಗು ಕಟ್ಟುವುದು, ಸಿಂಬಳ ಸುರಿಯುವುದು (ಕಪ್ಪು ಅಥವಾ ಕಂದು ಬಣ್ಣದ್ದು), ಮುಖದಲ್ಲಿ ನೋವು, ಮುಖದ ಭಾಗದಲ್ಲಿ ಕೆಲವೆಡೆ ಸ್ಪರ್ಶ ಸಂವೇದನೆ ಕಡಿಮೆಯಾಗುವುದು, ಹಲ್ಲು ನೋವು ಅಥವಾ ಹಲ್ಲುಗಳು ಸಡಿಲಾಗುವುದು ಮುಂತಾದ ಲಕ್ಷಣಗಳು ಕಂಡು ಬರಬಹುದು. ನಂತರ ಒಂದು ಬಾರಿ ಈ ವೈರಸ್ ಕಣ್ಣಿಗೆ ಪ್ರವೇಶಿಸಿದಾಗ ಕಣ್ಣು ಮಂಜಾಗುವುದು, ದೃಷ್ಟಿ ಎರಡಾಗಿ ಕಾಣುವುದು, ಕಣ್ಣು ಬಾತುಕೊಳ್ಳುವುದು, ಜ್ವರ ಇತ್ಯಾದಿ ಲಕ್ಷಣಗಳು ಕಾಣಿಸಬಹುದು.
ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣಗಳು
ಬ್ಲ್ಯಾಕ್ ಫಂಗಸ್ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇದ್ದೇ ಇರುತ್ತದೆ. ಆದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದಾಗ ಆತನಿಗೆ ಸೋಂಕು ತಗುಲಿದರೂ ಅದರಿಂದ ಏನೂ ಪರಿಣಾಮವಾಗುವುದಿಲ್ಲ. ಆದರೆ ಇತ್ತೀಚೆಗೆ ಈ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕೆಲ ಕಾರಣಗಳು ಹೀಗಿವೆ:
- ಕೋವಿಡ್ ಸೋಂಕಿತರಿಗೆ ದೀರ್ಘಾವಧಿಗೆ ಸ್ಟೆರಾಯ್ಡ್ ನೀಡುವುದರಿಂದ ಅವರ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವು ಅನಿಯಂತ್ರಿತಗೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗುತ್ತವೆ.
- ಇನ್ನು ಕೋವಿಡ್ ವೈರಸ್ ಸ್ವತಃ ರೋಗ ನಿರೋಧಕ ಶಕ್ತಿಯನ್ನು ಹಾಳು ಮಾಡುವುದರಿಂದ ಬ್ಲ್ಯಾಕ್ ಫಂಗಸ್ ಸೋಂಕು ಉಲ್ಬಣವಾಗಬಹುದು.
- ಟಾಸಿಲಿಝುಮಾಬ್ ನಂಥ ಇನ್ನಿತರ ಔಷಧಿಗಳ ಬಳಕೆ
- ಕೋವಿಡ್ ರೋಗಿಗಳಿಗೆ ಅಸಮರ್ಪಕ ರೀತಿಯಲ್ಲಿ ಆ್ಯಂಟಿಬಯಾಟಿಕ್ಸ್ ನೀಡುವುದು.
- ಕಲುಷಿತಗೊಂಡ ಆಕ್ಸಿಜನ್ ನೀಡುವುದು ಅಥವಾ ಸಲಕರಣೆಗಳಿಗೆ ಕಲುಷಿತ ನೀರು ಬಳಸುವುದು
- ಗಲೀಜಾದ ಮಾಸ್ಕಗಳನ್ನು ಬಹುಕಾಲದವರೆಗೆ ಉಪಯೋಗಿಸುವುದು
- ವೈದ್ಯಕೀಯ ಆಕ್ಸಿಜನ್ ಬದಲಾಗಿ ದೀರ್ಘಾವಧಿಯವರೆಗೆ ಇಂಡಸ್ಟ್ರಿಯಲ್ ಆಕ್ಸಿಜನ್ ಬಳಸುವುದು
- ಜಿಂಕ್ ಸಪ್ಲಿಮೆಂಟ್ಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸುವುದು
ಬ್ಲ್ಯಾಕ್ ಫಂಗಸ್ ಸೋಂಕು ತಡೆಗಟ್ಟುವುದು ಹೇಗೆ?
- ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚಾಗಲು ಡಯಾಬಿಟೀಸ್ ಮುಖ್ಯ ಕಾರಣವಾಗಿರುವುದರಿಂದ ಕೋವಿಡ್ ಸೋಂಕಿತರು ಗ್ಲುಕೋಸ್ ಮಟ್ಟವನ್ನು ಸೂಕ್ತವಾಗಿ ಕಾಪಾಡಿಕೊಳ್ಳಬೇಕು.
- ಮಾರ್ಗಸೂಚಿಯ ಅನುಸಾರವೇ ಸ್ಟೆರಾಯ್ಡ್ ನೀಡಬೇಕು
- ಎಲ್ಲರೂ ಮಾಸ್ಕ್ ಧರಿಸುವುದು
- ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಿಂದ ದೂರವಿರುವುದು
- ಕೋವಿಡ್ ರೋಗಿಗಳನ್ನು ಬಿಡುಗಡೆ ಮಾಡುವಾಗ ಅವರಿಗೆ ಬ್ಲ್ಯಾಕ್ ಫಂಗಸ್ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು
- ಆಕ್ಸಿಜನ್ ಬಳಸುವಾಗ ಸ್ವಚ್ಛತೆ ಕಾಪಾಡುವುದು
- ಸ್ವಚ್ಛಗೊಳಿಸದ ಮಾಸ್ಕ್ಗಳನ್ನು ಬಳಸದಿರುವುದು