ನವದೆಹಲಿ:2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಮಾಡಿ, ಅವರ ಕುಟುಂಬಸ್ಥರನ್ನು ಹತ್ಯೆ ಮಾಡಿದ ಅಪರಾಧಿಗಳು ಜೈಲಿನಿಂದ ಶಿಕ್ಷೆ ಅವಧಿಗೂ ಮೊದಲೇ ಬಿಡುಗಡೆ ಹೊಂದಲು ಮತ್ತು ಇನ್ನಿತರರು ದೀರ್ಘಾವಧಿ ಪೆರೋಲ್ ಪಡೆಯಲು ಹೇಗೆ ಅರ್ಹರು ಎಂಬುದನ್ನು ವಿವರಿಸಲು ಅಪರಾಧಿಗಳ ಪರ ವಕೀಲರನ್ನು ಪ್ರಶ್ನಿಸಿದೆ.
ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಪ್ರಕರಣದ ಅಪರಾಧಿಗಳ ಪರ ವಾದ ಮಂಡಿಸುತ್ತಿರುವ ವಕೀಲರ ಮೇಲೆ ಗುರುವಾರ ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದೆ. ಹೆಣ್ಣು ಮಗಳನ್ನು ರೇಪ್ ಮಾಡಿ ಆಕೆಯ ಕುಟುಂಬವನ್ನು ಬಲಿ ಪಡೆದ ಪಾತಕಿಗಳು ಕ್ಷಮಾದಾನಕ್ಕೆ ಹೇಗೆ ಅರ್ಹ ಮತ್ತು ಅವರು ಪೆರೋಲ್ ಮೇಲೆ ಹೇಗೆ ಹೊರಬರಲು ಅವಕಾಶ ನೀಡಬೇಕು ಎಂಬುದನ್ನು ತಿಳಿಸುವಂತೆ ಸೂಚಿಸಿತು.
ಅಪರಾಧಿಗಳಲ್ಲಿ ಒಬ್ಬರನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿ, ಶಿಕ್ಷೆಗೆ ಒಳಗಾದವರು ಘೋರ ಅಪರಾಧ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗಿರುವ ಯಾವುದೇ ವಿನಾಯಿತಿಯ ಪ್ರಯೋಜನವನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದರು.