ಭುವನೇಶ್ವರ್ (ಒಡಿಶಾ): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಎಸಿ ಕಂಪ್ರೆಸ್ಸರ್ ಸ್ಫೋಟ ಪ್ರಕರಣದಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಎರಡು ಕುಟುಂಬಗಳು ಗೊಂದಲಕ್ಕೆ ಸಿಲುಕಿದ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದ ವ್ಯಕ್ತಿ ಬದುಕಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ; ಕಳೆದ ಡಿಸೆಂಬರ್ 26ರಂದು ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎಸಿ ಕಂಪ್ರೆಸ್ಸರ್ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಇದೇ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಡಿಸೆಂಬರ್ 30ರಂದು ದಿಲೀಪ್ ಸಮಂತ್ರಿ ಎಂಬವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಘೋಷಿಸಿತ್ತು. ಬಳಿಕ ಡಿಸೆಂಬರ್ 31ರಂದು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ದೇಹವನ್ನು ಆಸ್ಪತ್ರೆ ಸಿಬ್ಬಂದಿ ದಿಲೀಪ್ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಬಳಿಕ ದಿಲೀಪ್ ಕುಟುಂಬಸ್ಥರು ಅಂತ್ಯ ಸಂಸ್ಕಾರಗಳನ್ನು ನಡೆಸಿದ್ದರು. ದಿಲೀಪ್ ಸಾವನ್ನಪ್ಪಿರುವ ಬಗ್ಗೆ ತಿಳಿದ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಆದರೆ, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿರಂಜನ್ ಮಲಿಕ್ ಎಂದುಕೊಂಡಿದ್ದ ವ್ಯಕ್ತಿ ಗುಣಮುಖನಾಗಿದ್ದಾನೆ. ಅಲ್ಲದೇ, ತಾನು ಜ್ಯೋತಿರಂಜನ್ ಮಲಿಕ್ ಅಲ್ಲ, ಬದಲಿಗೆ ದಿಲೀಪ್ ಸಮಂತ್ರಿ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಮೃತಪಟ್ಟಿರುವುದು ಯಾರು ಎಂಬುದಾಗಿ ಎರಡೂ ಕುಟುಂಬಗಳ ನಡುವೆ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಆಸ್ಪತ್ರೆಯ ಸಿಇಒ ಸ್ಮಿತಾ ಪಧಿ, ಆಸ್ಪತ್ರೆಯಲ್ಲಿ ಸಂಭವಿಸಿದ ಎಸಿ ಕಂಪ್ರೆಸ್ಸರ್ ಸ್ಫೋಟ ಸಂದರ್ಭ ನಾಲ್ವರು ಗಂಭೀರ ಗಾಯಗೊಂಡಿದ್ದರು. ಇವರಾರು ಆಸ್ಪತ್ರೆಯ ಸಿಬ್ಬಂದಿಗಳಲ್ಲ. ಇವರು ಹೊರಗಿನ ಸಂಸ್ಥೆಯ ಕೆಲಸಗಾರರಾಗಿದ್ದಾರೆ. ಈ ಸಂಸ್ಥೆಯ ವ್ಯಕ್ತಿಯೊಬ್ಬರು ಸ್ಫೋಟದಲ್ಲಿ ಗಾಯಗೊಂಡವರ ಗುರುತನ್ನು ಪತ್ತೆ ಹಚ್ಚಿದ್ದರು. ಡಿಸೆಂಬರ್ 30ರಂದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇವರನ್ನು ದಿಲೀಪ್ ಸಮಂತ್ರಿ ಎಂದು ಹೇಳಲಾಗಿತ್ತು. ಅಲ್ಲದೇ, ಕುಟುಂಬಸ್ಥರು ಕೂಡ ಮೃತದೇಹವನ್ನು ದಿಲೀಪ್ ಸಮಂತ್ರಿ ಅವರದ್ದೇ ಎಂದು ಗುರುತಿಸಿದ್ದರು. ಆದ್ದರಿಂದ ನಾವು ಮೃತದೇಹವನ್ನು ದಿಲೀಪ್ ಕುಟುಂಬಕ್ಕೆ ಹಸ್ತಾಂತರಿಸಿದ್ದೆವು ಎಂದು ಹೇಳಿದರು.
ಈ ಬಗ್ಗೆ ದಿಲೀಪ್ ಅಳಿಯ ಮನೋಜ್ ಸಮಂತ್ರಿ ಮಾತನಾಡಿ, ಡಿಸೆಂಬರ್ 31ರಂದು ಆಸ್ಪತ್ರೆ ಸಿಬ್ಬಂದಿ ದಿಲೀಪ್ ಎಂದು ಹೇಳಿ ಒಂದು ಮೃತದೇಹವನ್ನು ನೀಡಿದ್ದರು. ಈ ಮೃತದೇಹವನ್ನು ಪ್ಲಾಸ್ಟಿಕ್ನಿಂದ ಮುಚ್ಚಲಾಗಿತ್ತು. ಶವ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಬಳಿಕ ನಾವು ಮೃತದೇಹದ ಅಂತ್ಯಸಂಸ್ಕಾರಗಳನ್ನು ಮುಗಿಸಿದ್ದೇವೆ. ಆದರೆ, ಇದೀಗ ದಿಲೀಪ್ ಬದುಕಿದ್ದಾನೆ ಎಂದು ಹೇಳಿದರು. ಇನ್ನೊಂದೆಡೆ, ದಿಲೀಪ್ ಸಾವಿನ ಸುದ್ದಿ ಕೇಳಿ ಆತನ ಹೆಂಡತಿ ಸುನಾ ಸಮಂತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಸಮಂತ್ರಿ ಕುಟುಂಬ ಇನ್ನಷ್ಟು ಆಘಾತಕ್ಕೆ ಒಳಗಾಗಿದೆ.
ಸ್ಫೋಟ ಪ್ರಕರಣದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದು, ಡಿಸೆಂಬರ್ 30ರಂದು ಓರ್ವ ಸಾವನ್ನಪ್ಪಿದ್ದ. ಜನವರಿ 3ರಂದು ಮತ್ತೋರ್ವ ಸಾವನ್ನಪ್ಪಿದ್ದು, ಮೃತನನ್ನು ಸ್ರೀತಮ್ ಸಾಹು ಎಂದು ಗುರುತಿಸಲಾಗಿದೆ. ಸ್ಫೋಟ ಪ್ರಕರಣದಲ್ಲಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಮೃತರ ಕುಟುಂಬಸ್ಥರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಯುವತಿ ಮೇಲೆ ಅತ್ಯಾಚಾರ ಆರೋಪ : ಎಎಸ್ಪಿ ವಿರುದ್ಧ ಪ್ರಕರಣ ದಾಖಲು