ರುದ್ರಪ್ರಯಾಗ (ಉತ್ತರಾಖಂಡ) :ಒಂದೆಡೆ ಕೇದಾರನಾಥ ಯಾತ್ರೆಯಲ್ಲಿ ಬಳಕೆಯಾಗುವ ಕತ್ತೆ ಹಾಗೂ ಕುದುರೆಗಳ ಸಾವು ಹೆಚ್ಚುತ್ತಲೇ ಇದ್ದರೆ, ಮತ್ತೊಂದೆಡೆ ಅವುಗಳ ಮಾಲೀಕರ ಜೇಬು ಮಾತ್ರ ತುಂಬುತ್ತಿದೆ. ಕೇದಾರನಾಥ ಯಾತ್ರೆಯಲ್ಲಿ 46 ದಿನಗಳಲ್ಲಿ ಕತ್ತೆ ಹಾಗೂ ಕುದುರೆ ಮಾಲೀಕರು 56 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎನ್ನಲಾಗ್ತಿದೆ. ಇಷ್ಟೆಲ್ಲಾ ಆದರೂ ಈ ಪ್ರಾಣಿಗಳ ಸಂಕಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಪ್ರವಾಸಿಗರು ತಮ್ಮ ಸರಕುಗಳನ್ನು ಈ ಪ್ರಾಣಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಸಾಗಿಸುತ್ತಾರೆ. ಈ ಕಾರಣಕ್ಕೆ ಇದುವರೆಗೆ 175 ಪ್ರಾಣಿಗಳು ಸಾವಿಗೀಡಾಗಿವೆ ಎಂದು ತಿಳಿದುಬಂದಿದೆ.
ಈ ವರ್ಷ ಗೌರಿಕುಂಡದಿಂದ ಕೇದಾರನಾಥಕ್ಕೆ 8,516 ಕುದುರೆ ಹಾಗೂ ಕತ್ತೆಗಳ ಸಂಖ್ಯೆಯನ್ನು ನೋಂದಾಯಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಯಾತ್ರಿಕರು ಈ ದುಸ್ತರವಾದ 16 ಕಿ.ಮೀ ದೂರವನ್ನು ಕುದುರೆ ಮತ್ತು ಕತ್ತೆಗಳ ಮೇಲೆ ಕ್ರಮಿಸುತ್ತಾರೆ. ಇಲ್ಲಿಯವರೆಗೆ 2,68,858 ಪ್ರಯಾಣಿಕರು ಕುದುರೆ ಮತ್ತು ಕತ್ತೆಗಳ ಮೂಲಕ ಕೇದಾರನಾಥ ತಲುಪಿ ದೇವರ ದರ್ಶನ ಪಡೆದು ಹಿಂದಿರುಗಿದ್ದಾರೆ. ಈ ವೇಳೆ 56 ಕೋಟಿ ರೂಪಾಯಿ ವ್ಯವಹಾರ ನಡೆದಿದ್ದು, ಜಿಲ್ಲಾ ಪಂಚಾಯಿತಿಗೆ ನೋಂದಣಿ ಶುಲ್ಕವಾಗಿ ಸುಮಾರು 29 ಲಕ್ಷ ರೂ. ಆದಾಯ ಬಂದಿದೆ.
ಇಷ್ಟೆಲ್ಲಾ ಇದ್ದರೂ ಈ ಕಾಡುಪ್ರಾಣಿಗಳಿಗೆ ಯಾವುದೇ ಸೌಲಭ್ಯವಿಲ್ಲ. ಮಾರ್ಗದಲ್ಲಿ ನೀರಿನ ವ್ಯವಸ್ಥೆ ಇಲ್ಲ ಅಥವಾ ಪ್ರಾಣಿಗಳ ನಿಲುಗಡೆಗೆ ತಾಣ ಇಲ್ಲ. ನೋಂದಾಯಿಸಲಾದ ಈ ಪ್ರಾಣಿಗಳನ್ನು ಕೇದಾರನಾಥಕ್ಕೆ ದಿನದಲ್ಲಿ ಒಂದೇ ಬಾರಿ ಮಾತ್ರ ಪ್ರವಾಸಿಗರನ್ನು ಕರೆದುಕೊಂಡು ಹೋಗಬೇಕು. ಆದರೆ, ಹೆಚ್ಚು ಗಳಿಸುವ ಆಸೆಯಲ್ಲಿ ಮಾಲೀಕರು ಎರಡು ಮೂರು ಬಾರಿ ದೇವಾಲಯಕ್ಕೆ ಪ್ರವಾಸಿಗರುನ್ನು ಕರೆತರುತ್ತಿದ್ದಾರೆ. ಅಲ್ಲದೆ ಪ್ರಾಣಿಗಳಿಗೆ ಸಾಕಷ್ಟು ಆಹಾರವನ್ನೂ ನೀಡದೆ ವಿಶ್ರಾಂತಿಯನ್ನೂ ಕೊಡದೆ ದುಡಿಸಿಕೊಳ್ಳುತ್ತಿದ್ದಾರೆ.