ರುದ್ರಪ್ರಯಾಗ (ಉತ್ತರಖಂಡ):ಭಗವಾನ್ ಶಿವನ 11ನೇ ಜ್ಯೋತಿರ್ಲಿಂಗ ಇರುವ ಕೇದಾರನಾಥಕ್ಕೆ ಅಪಾರ ಭಕ್ತರ ದಂಡೇ ಹರಿದು ಬರುತ್ತಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈ ಯಾತ್ರೆಯನ್ನು ನಿರ್ವಹಿಸಲು ಸರ್ಕಾರವು ಖಾಸಗಿ ಹೆಲಿಕಾಪ್ಟರ್ ಕಂಪನಿಗಳನ್ನು ತೊಡಗಿಸಿಕೊಂಡಿದೆ. ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಧಾಮ ತಲುಪುತ್ತಾರೆ. ನಡೆಯಲು ಸಾಧ್ಯವಾಗದ ಅಥವಾ ನಡೆಯಲು ಬಾರದವರಿಗೆ ಕೇದಾರನಾಥ ಧಾಮದಲ್ಲಿ ಕುದುರೆ, ಹೇಸರಗತ್ತೆಗಳ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಭಾರ ಸರಕುಗಳು, ಮನುಷ್ಯರನ್ನು ಹೊತ್ತುಹೊಂಡು ಸಾಗುವ ಮೂಕ ಪ್ರಾಣಿಗಳು ಕೇದಾರನಾಥದಂತಹ ಕಡಿದಾದ ಏರುಗಳನ್ನು ಬಹಳ ಕಷ್ಟದಿಂದ ಏರುತ್ತವೆ. ಜನಸ್ನೇಹಿಯಾಗಿರುವ ಈ ಕುದುರೆ ಮತ್ತು ಹೇಸರಗತ್ತೆಗಳೊಂದಿಗೆ ಜನರು ಕ್ರೌರ್ಯದ ಎಲ್ಲ ಮಿತಿಗಳನ್ನೂ ಮೀರುತ್ತಿದ್ದಾರೆ.
ಕೆಲವೊಮ್ಮೆ ಈ ಪ್ರಾಣಿಗಳಿಗೆ ದೊಣ್ಣೆ ಮತ್ತು ರಾಡ್‌ಗಳಿಂದ ಹೊಡೆಯಲಾಗುತ್ತಿದೆ. ಮತ್ತೆ ಕೆಲವೊಮ್ಮೆ ಗಾಯಗೊಂಡ ಪ್ರಾಣಿಗಳಿಂದಲೇ ಕೆಲಸ ಮಾಡಿಸುತ್ತಾರೆ. ಇದೀಗ ಧಾಮದಲ್ಲಿ ಯಾರೂ ಊಹಿಸಲೂ ಸಾಧ್ಯವಾಗದಂತಹ ಘಟನೆ ನಡೆದಿದೆ. ಕೇದಾರನಾಥ ಮಾರ್ಗದ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸಲಾಗುತ್ತಿದೆ. ಖೋಡಾ ಹೇಸರಗತ್ತೆ- ಕುದುರೆ ನಿರ್ವಾಹಕರು, ಕುದುರೆಗಳನ್ನು ಧೂಮಪಾನ ಮಾಡಿಸಲು ಪೀಡಿಸುತ್ತಿದ್ದಾರೆ. ಇದರಿಂದ ಅವು ಹೆಚ್ಚು ಕೆಲಸ ಮಾಡುತ್ತವೆ ಮತ್ತು ಸಣ್ಣಪುಟ್ಟ ಗಾಯಗಳ ಪರಿಣಾಮವನ್ನು ಅನುಭವಿಸುವುದಿಲ್ಲ ಎನ್ನುವುದು ಅವುಗಳ ಮಾಲೀಕರ ಲೆಕ್ಕಾಚಾರ. ಇದೀಗ ಈ ಸಂಬಂಧ ಪ್ರಕರಣ ದಾಖಲಾಗಿದೆ.