ಪಲಾಮು (ಜಾರ್ಖಂಡ್): ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೃತ ಮಕ್ಕಳೆಲ್ಲರೂ ಶಾಲಾ ವಿದ್ಯಾರ್ಥಿಗಳು ಆಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಭೀಕರ ಘಟನೆಯಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ:ಅತಿ ವೇಗದಿಂದ ಬಂದ ಟಿಪ್ಪರ್, ರಸ್ತೆ ಪಕ್ಕದಲ್ಲಿ ಮೇಯುತ್ತಿದ್ದ 30ಕುರಿಗಳು ಸಾವು
ಇಲ್ಲಿನ ನೌದಿಹಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಶುನಪುರ ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ನಾಲ್ವರು ಮಕ್ಕಳು ಸೇರಿ ಐವರನ್ನು ಬಲಿ ಪಡೆದಿದೆ. ಚಾಲಕ ಕುಡಿದ ನಶೆಯಲ್ಲಿದ್ದ ಎಂದು ತಿಳಿದು ಬಂದಿದ್ದು, ಈ ದುರಂತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಕಾರ್ಪಿಯೋ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮದುವೆ ಸಮಾರಂಭದಲ್ಲಿದ್ದ ಮಕ್ಕಳು: ಬಿಶುನಪುರದ ವಿವೇಕ್, ರಾಜಾ, ಫಿರೋಜ್, ನಿತೇಶ್ ಎಂಬುವವರೇ ಮೃತ ಮಕ್ಕಳೆಂದು ಗುರುತಿಸಲಾಗಿದೆ. ಮತ್ತೊಬ್ಬ ಗೌರವ್ ಕುಮಾರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುವಾರ ಇಲ್ಲಿನ ಅರವಿಂದ್ ಮಿಸ್ತ್ರಿ ಎಂಬುವವರ ಮಗನ ಮದುವೆ ಸಮಾರಂಭ ನಡೆಯುತ್ತಿತ್ತು. ಇದರಲ್ಲಿ ಇವರೆಲ್ಲೂ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಮದುವೆ ಸಮಾರಂಭದಲ್ಲಿ ಈ ಮಕ್ಕಳ ಪಾಲ್ಗೊಂಡಿದ್ದಾಗ ಅತಿ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರು ಗುದ್ದಿದೆ. ಇದರ ಪರಿಣಾಮ ಕಾರಿನ ಚಕ್ರದ ಅಡಿಗೆ ಸಿಲುಕಿ ನಾಲ್ವರು ಮಕ್ಕಳು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಗಾಯಾಳು ಗೌರವ್ ಪ್ರತಿಕ್ರಿಯಿಸಿದ್ದು, ಎಲ್ಲವೂ ಕ್ಷಣದಲ್ಲಿ ಮಾತ್ರ ನಡೆದು ಹೋಯಿತು. ಏನಾಯಿತು, ಹೇಗಾಯಿತು ಎಂದೂ ತಿಳಿಯಲೇ ಇಲ್ಲ. ಪ್ರಜ್ಞೆ ಬಂದ ನಂತರವೂ ನನಗೆ ಏನು ನಡೆಯಿತು ಎಂದು ನೆನಪಿಗೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ಸ್ಕಾರ್ಪಿಯೋಗೆ ಸಿಲುಕಿ ಹಸು ಕೂಡ ಸಾವು: ಈ ಘಟನೆಯ ಎರಡು ಕಿಲೋಮೀಟರ್ ಮೊದಲು ಸ್ಕಾರ್ಪಿಯೋ ಚಾಲಕ ಹಸು ಮೇಲೆ ಕೂಡ ಚಲಾಯಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಹಸು ಸಾವನ್ನಪ್ಪಿದೆ. ಹಸುವನ್ನು ಕೊಂದ ನಂತರ ಸ್ಕಾರ್ಪಿಯೋ ಚಾಲಕ ಬಿಶುನ್‌ಪುರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ. ಇದೇ ವೇಳೆ ಮಕ್ಕಳು ಮೇಲೆ ಸ್ಕಾರ್ಪಿಯೋ ಹರಿಸಿದ್ದಾನೆ ಎಂದೂ ಹೇಳಲಾಗುತ್ತಿದೆ.
ಭೀಕರ ಅಪಘಾತದಲ್ಲಿ ಐವರು ಒಟ್ಟಿಗೆ ಸಾವನ್ನಪ್ಪಿರುವ ವಿಷಯ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮತ್ತೊಂದೆಡೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಗಾಯಾಳುವನ್ನು ಗೌರವ್ ಕುಮಾರ್ನನ್ನು ಚಿಕಿತ್ಸೆಗಾಗಿ ಎಂಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಬಗ್ಗೆ ನೌದಿಹಾ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ.. ತಪ್ಪಿಸಿಕೊಳ್ಳಲು ಬಸ್ನಿಂದ ಜಿಗಿದ ಮಹಿಳೆ