ಜೈಪುರ್(ರಾಜಸ್ಥಾನ): ಇಲ್ಲಿನ ಚಕ್ಸು - ಜೈಪುರ್ ಹೆದ್ದಾರಿಯಲ್ಲಿ ವ್ಯಾನ್ - ಕಂಟೇನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ದುರ್ಮರಣಕ್ಕೀಡಾಗಿದ್ದು, ಘಟನೆಯಲ್ಲಿ ಮತ್ತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆ(ರೀಟ್) ಬರೆಯಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ವ್ಯಾನ್ನಲ್ಲಿ ಡ್ರೈವರ್ ಸೇರಿದಂತೆ 11 ಜನರು ಪ್ರಯಾಣ ಮಾಡುತ್ತಿದ್ದರು. ಇವರೆಲ್ಲರೂ ಬಾರಾನ್ನಿಂದ ಸೀಕರ್ಗೆ ವ್ಯಾನ್ನಲ್ಲಿ ತೆರಳುತ್ತಿದ್ದರು.
ಇದನ್ನೂ ಓದಿರಿ:ಲೈಂಗಿಕ ಕಿರುಕುಳಕ್ಕೆ ಬೇಸತ್ತು, ತಂದೆಯನ್ನೇ ಹತ್ಯೆ ಮಾಡಿದ ಮಗಳು!
ಏಕಾಏಕಿ ನಿಯಂತ್ರಣ ಕಳೆದುಕೊಂಡಿರುವ ವ್ಯಾನ್, ಮುಂದೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಹೀರಾ ಲಾಲ್ ಸೈನಿ ತಿಳಿಸಿದ್ದಾರೆ. ಸಾವನ್ನಪ್ಪಿದವರನ್ನ ವಿಷ್ಣು ನಗರ್, ತೇಜ್ರಾಜ್ ಮೇಘ್ವಾಲ್, ಸತ್ಯನಾರಾಯಣ್, ವೇದಪ್ರಕಾಶ್ ಮೀನಾ, ಸುರೇಶ್ ಹಾಗೂ ದಿಲೀಪ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಬಾರಾನ್ನವರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡಿರುವವರಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿ ರಾಜಸ್ಥಾನ ಸಿಎಂ ಆದೇಶ ಹೊರಡಿಸಿದ್ದಾರೆ.